×
Ad

ಮೋದಿ ಮಹಾನ್ ಸುಳ್ಳ, ಹಿಮಂತ ಬಿಸ್ವ ಕಂಸ: ಕನ್ಹಯ್ಯ ವಾಗ್ದಾಳಿ

Update: 2021-03-28 09:54 IST

ಮೋರಿಗಾಂವ್, ಮಾ.28: ಬಿಜೆಪಿ ಮೇಲೆ ಶನಿವಾರ ವಾಗ್ದಾಳಿ ನಡೆಸಿದ ಸಿಪಿಐ ಮುಖಂಡ ಕನ್ಹಯ್ಯಾ ಕುಮಾರ್, ಪ್ರಧಾನಿ ನರೇಂದ್ರ ಮೋದಿಯನ್ನು ಮಹಾನ್ ಸುಳ್ಳ ಎಂದು ಬಣ್ಣಿಸಿದ್ದಾರೆ. ಅಂತೆಯೇ ಅಸ್ಸಾಂನ ಬಿಜೆಪಿ ಮುಖಂಡ ಹಿಮಂತ ಬಿಸ್ವ ಶರ್ಮಾರನ್ನು ಮಹಾರಾಷ್ಟ್ರದ ಕಂಸನಿಗೆ ಹೋಲಿಸಿದ್ದಾರೆ.

ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ನಾನು ಜೈಲು ಸೇರಿದ್ದೆ ಎಂದು ತಮ್ಮ ಬಾಂಗ್ಲಾ ಭೇಟಿ ವೇಳೆ ಪ್ರಧಾನಿ ಮೋದಿ ನೀಡಿರುವ ಹೇಳಿಕೆ ಶುದ್ಧ ಸುಳ್ಳು ಎಂದು ಕನ್ಹಯ್ಯಾ ಹೇಳಿದರು. ರಾಷ್ಟ್ರೀಯತೆಯ ಹೆಸರಿನಲ್ಲಿ ದೇಶದ ಸಂಪತ್ತು ಮಾರಾಟ ಮಾಡುವವರನ್ನು ಬೆಂಬಲಿಸಬೇಡಿ ಎಂದು ಮನವಿ ಮಾಡಿದರು.

"ಮೋದಿಯವರು 2014ರಲ್ಲಿ ಭರವಸೆ ನೀಡಿದಂತೆ ವಾರ್ಷಿಕವಾಗಿ ಎರಡು ಕೋಟಿ ಉದ್ಯೋಗ ಸೃಷ್ಟಿಯಾಗಿದೆಯೇ ಅಥವಾ ಕಪ್ಪುಹಣ ದೇಶಕ್ಕೆ ಬಂದಿದೆಯೇ" ಎಂದು ಯುವ ಸಿಪಿಐ ಮುಖಂಡ ಪ್ರಶ್ನಿಸಿದರು. "ಈ ಐದು ವರ್ಷದಲ್ಲಿ ಏನಾಗಿದೆ? ಅದೇ ಜನ ಮತ್ತೆ ಹೇಗೆ ಮತ ಯಾಚಿಸುತ್ತಿದ್ದಾರೆ?"

"ನಾನು ಇಲ್ಲಿಗೆ ಬಂದಾಗ ಕೆಲ ಮಂದಿ ನಾನು ಮೋದಿಯವರಿಗೆ ಸವಾಲಾಗಬಹುದು ಎಂದು ಹೇಳಿದರು. ಆಗ ನಾನು ಮೋದಿಗೆ ಸವಾಲಾಗಬೇಕಿದ್ದರೆ ವಿಶ್ವದ ಅತಿದೊಡ್ಡ ಸುಳ್ಳ ಆಗಬೇಕು ಎಂದು ಹೇಳಿದೆ" ಎಂಬುದಾಗಿ ಜೆಎನ್‌ಯು ಮಾಜಿ ವಿದ್ಯಾರ್ಥಿ ಮುಖಂಡ ಹೇಳಿದರು.

"ಮೋದಿ ಢಾಕಾದಲ್ಲಿ ಏನು ಹೇಳಿದ್ದೀರಿ ಎಂದು ಕೇಳಿದ್ದೀರಾ? ಬಾಂಗ್ಲಾದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕೊಡುಗೆ ನೀಡಿದ್ದಾಗಿ ಹೇಳಿದ್ದಾರೆ. ಸತ್ಯಾಗ್ರಹದಲ್ಲಿ ಭಾಗವಹಿಸಿ ಜೈಲು ಸೇರಿದ್ದೆ ಎಂದು ಹೇಳಿದ್ದಾರೆ. ಬಿಜೆಪಿ ಮುಖಂಡರು ಮಾತ್ರ ಈ ಮಟ್ಟದ ಸುಳ್ಳು ಸೃಷ್ಟಿಸಬಲ್ಲರು" ಎಂದು ವ್ಯಂಗ್ಯವಾಡಿದರು.

ಬಾಂಗ್ಲಾ ವಿಮೋಚನಾ ಚಳವಳಿಯನ್ನು ಭಾರತ ಬೆಂಬಲಿಸಿತ್ತು ಹಾಗೂ ಪಾಕಿಸ್ತಾನ ವಿರೋಧಿಸಿತ್ತು. ಆದ್ದರಿಂದ ಮೋದಿ ಎಲ್ಲಿ ಸತ್ಯಾಗ್ರಹ ಮಾಡಿದರು, ಅವರನ್ನು ಪಾಕಿಸ್ತಾನ ಸರಕಾರ ಜೈಲಿಗೆ ಕಳುಹಿಸಿತ್ತೇ ಅಥವಾ ಭಾರತ ಸರಕಾರವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದು ಶುದ್ಧ ಸುಳ್ಳು ಎಂದು ವಿಶ್ಲೇಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News