ಆಸ್ಪತ್ರೆಯಲ್ಲಿ ಅಗ್ನಿ ಆಕಸ್ಮಿಕ: ಸುಮಾರು 150 ರೋಗಿಗಳ ಸ್ಥಳಾಂತರ
ಲಕ್ನೊ: ಉತ್ತರಪ್ರದೇಶದ ಕಾನ್ಪುರ ಪಟ್ಟಣದ ಸರಕಾರಿ ಆಸ್ಪತ್ರೆಯ ಹೃದ್ರೋಗ ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಾವು-ನೋವುಗಳ ಬಗ್ಗೆ ತಕ್ಷಣಕ್ಕೆ ವರದಿಗಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ರವಿವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಾಗ ಕಾನ್ಪುರ ಪಟ್ಟಣದಲ್ಲಿರುವ ಉತ್ತರಪ್ರದೇಶ ಸರಕಾರದ ಗಣೇಶ್ ಶಂಕರ್ ವಿದ್ಯಾರ್ಥಿ ವೈದ್ಯಕೀಯ ಕಾಲೇಜಿನ ಭಾಗವಾದ ಎಲ್ ಪಿಎಸ್ ಇನ್‍ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿಯಲ್ಲಿ ಕನಿಷ್ಠ 146 ರೋಗಿಗಳು ದಾಖಲಾಗಿದ್ದರು. ಎಲ್ಲ ರೋಗಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಕಿಯನ್ನು ನಿಯಂತ್ರಿಸಲಾಗುತ್ತಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ 146 ರೋಗಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. 9 ರೋಗಿಗಳು ಇನ್ನೂ ಐಸಿಯುನಲ್ಲಿದ್ದಾರೆ. ಅವರು ವೈದ್ಯಕೀಯವಾಗಿ ಸುರಕ್ಷಿತವಾಗಿದ್ದಾರೆ. ಅಗ್ನಿಶಾಮಕ ದಳದಿಂದ ಸಾವು-ನೋವಿನ ವರದಿಯಾಗಿಲ್ಲ ಎಂದು ಕಾನ್ಪುರ ಪೊಲೀಸ್ ಆಯುಕ್ತ ಅಸೀಮ್ ಅರುಣ್ ತಿಳಿಸಿದ್ದಾರೆ.