ಜನತಾ ಕರ್ಫ್ಯೂ ಜಗತ್ತಿನ ಜನರಿಗೆ ʼಸ್ಫೂರ್ತಿಯಾಗಿʼ ಮಾರ್ಪಟ್ಟಿತು: ಮನ್‌ ಕಿ ಬಾತ್‌ ನಲ್ಲಿ ಪ್ರಧಾನಿ ಮೋದಿ

Update: 2021-03-28 07:16 GMT

ಹೊಸದಿಲ್ಲಿ: ಕೊರೋನ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ದೇಶವು ಕೈಗೊಂಡಿರುವ ಪ್ರಯತ್ನಗಳನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶ್ಲಾಘಿಸಿದ್ದಾರೆ. 'ಮನ್ ಕಿ ಬಾತ್' ನ 75 ನೇ ಆವೃತ್ತಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜನತಾ ಕರ್ಫ್ಯೂ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿದರು.

"ಕಳೆದ ಮಾರ್ಚ್ ನಲ್ಲಿ ರಾಷ್ಟ್ರವು ಜನತಾ ಕರ್ಫ್ಯೂ ಕೈಗೊಂಡಿತ್ತು. ಮೊದಲಿನಿಂದಲೂ ಭಾರತದ ಜನರು ಕೋವಿಡ್ -19 ವಿರುದ್ಧ ಉತ್ಸಾಹಭರಿತ ಹೋರಾಟ ನಡೆಸಿದ್ದಾರೆ" ಎಂದು ಪ್ರಧಾನಿ ಮೋದಿ ಮಾಸಿಕ ರೇಡಿಯೋ ಭಾಷಣದಲ್ಲಿ ಹೇಳಿದರು.

ಭಾರತದ ಜನರು ನಡೆಸಿದ ಜನತಾ ಕರ್ಫ್ಯೂ ನಂತರ ಜಗತ್ತಿಗೆ ಸ್ಫೂರ್ತಿಯಾಯಿತು ಎಂದು ಅವರು ಹೇಳಿದರು.

"ಮುಂಚೂಣಿ ಕಾರ್ಮಿಕರನ್ನು ಗೌರವಿಸುವ ಸಲುವಾಗಿ ಚಪ್ಪಾಳೆ ತಟ್ಟುವ ಮತ್ತು ಪಾತ್ರೆಗಳಿಂದ ಶಬ್ಧ ಮಾಡಿದ್ದನ್ನು ಎಲ್ಲ ಆರೋಗ್ಯ ಕಾರ್ಯಕರ್ತರು ವ್ಯಾಪಕವಾಗಿ ಪ್ರಶಂಸಿಸಿದ್ದಾರೆ" ಎಂದು ಮೋದಿ ಹೇಳಿದರು.

"ಕಳೆದ ವರ್ಷ ಈ ಸಂದರ್ಭದಲ್ಲಿ, ಕೋವಿಡ್ -19 ಗೆ ಲಸಿಕೆ ನೀಡಬಹುದೇ ಮತ್ತು ಅದನ್ನು ಯಾವಾಗ ಹೊರತರಲಾಗುವುದು ಎಂಬ ಪ್ರಶ್ನೆ ಇತ್ತು. ಇಂದು, ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನ ಭಾರತದಲ್ಲಿ ನಡೆಯುತ್ತಿದೆ" ಎಂದು ಅವರು ಹೇಳಿದರು.

ಜನತಾ ಕರ್ಫ್ಯೂ 2020 ರ ಮಾರ್ಚ್ 22 ರಂದು ಬೆಳಗ್ಗೆ 7 ರಿಂದ ರಾತ್ರಿ 9 ರವರೆಗೆ 14 ಗಂಟೆಗಳ ಕಾಲ ಸ್ವಯಂ ಹೇರಿದ ಕರ್ಫ್ಯೂ ಆಗಿತ್ತು. ಪ್ರಧಾನಿ ಮೋದಿ ಮನವಿಯ ನಂತರ ಇದನ್ನು ಜಾರಿಗೆ ತರಲಾಯಿತು. ಬಳಿಕ ಅದು ಲಾಕ್‌ ಡೌನ್‌ ಆಗಿ ಮಾರ್ಪಟ್ಟಿತ್ತು.

ಮಿಥಾಲಿ ರಾಜ್, ಸಿಂಧು ಸಾಧನೆ ಶ್ಲಾಘಿಸಿದ ಪ್ರಧಾನಿ ಮೋದಿ

  ಭಾರತ ಮಹಿಳಾ ಕ್ರೀಡಾಪಟುಗಳಾದ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿಶ್ಲಾಘಿಸಿದರು,

ಮಾರ್ಚ್ ತಿಂಗಳಲ್ಲಿ ನಾವು ಮಹಿಳಾ ದಿನಾಚರಣೆಯನ್ನು ಆಚರಿಸುತ್ತೇವೆ. ಹಲವು ಮಹಿಳಾ ಆಟಗಾರ್ತಿಯರು ತಮ್ಮ ಹೆಸರಲ್ಲಿ ದಾಖಲೆಗಳನ್ನು ಹಾಗೂ ಪದಕಗಳನ್ನು ಗಳಿಸಿದ್ದಾರೆ. ದಿಲ್ಲಿಯಲ್ಲಿ ನಡೆದಿದ್ದ ಐಎಸ್ ಎಸ್ ಎಫ್ ವಿಶ್ವಕಪ್ ಶೂಟಿಂಗ್ ನಲ್ಲಿ ಭಾರತವು ಅಗ್ರಸ್ಥಾನ ಪಡೆದಿತ್ತು. ಚಿನ್ನದ ಪದಕ ಗೆಲ್ಲುವಲ್ಲಿಯೂ ಭಾರತ ಅಗ್ರಸ್ಥಾನ ಗಳಿಸಿತ್ತು ಎಂದು ಮೋದಿ ಹೇಳಿದರು.

ಅಂತರ್‍ರಾಷ್ಟ್ರೀಯ ಕ್ರಿಕೆಟ್ ನಲ್ಲಿ 10,000 ರನ್ ಗಳಿಸಿದ ಸಾಧನೆ ಮಾಡಿರುವ ಭಾರತೀಯ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ, ಬಿಡಬ್ಲುಎಫ್ ಸ್ವಿಸ್ ಓಪನ್ ಸೂಪರ್ 300 ಟೂರ್ನಮೆಂಟ್ ನಲ್ಲಿ ಪಿ.ವಿ. ಸಿಂಧು ಬೆಳ್ಳಿ ಪದಕವನ್ನು ಜಯಿಸಿದ್ದಕ್ಕೂ ಅಭಿನಂದನೆ ಸಲ್ಲಿಸಿದ್ದಾರೆ. ಭಾರತೀಯ ಮಹಿಳೆಯರು ವಿಜ್ಞಾನ, ಕ್ರೀಡೆಗಳು ಹಾಗೂ ಇತರ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News