ಮಹಾರಾಷ್ಟ್ರದ ಸಮ್ಮಿಶ್ರ ಸರಕಾರದ ಬಿಕ್ಕಟ್ಟಿನ ಮಧ್ಯೆ ಕುತೂಹಲ ಕೆರಳಿಸಿದ ಶರದ್ ಪವಾರ್-ಅಮಿತ್ ಶಾ ಭೇಟಿ

Update: 2021-03-28 14:41 GMT

ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಮಧ್ಯೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಹಾಗೂ  ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಜರಾತ್  ರಾಜಧಾನಿಯಲ್ಲಿ ರಹಸ್ಯವಾಗಿ ಭೇಟಿಯಾಗಿದ್ದಾರೆ ಎಂದು ವರದಿಯಾಗಿದ್ದು, ಈ ಸುದ್ದಿಯನ್ನು ಖಚಿತಪಡಿಸದ ಅಥವಾ ನಿರಾಕರಿಸದ ಶಾ, ಪ್ರತಿಯೊಂದನ್ನು ಬಹಿರಂಗಪಡಿಸುವ ಅಗತ್ಯವಿಲ್ಲ ಎಂದಿದ್ದಾರೆ.

ಅಹಮದಾಬಾದ್ ನಲ್ಲಿ  ಮಹಾರಾಷ್ಟ್ರದ ಹಿರಿಯ ರಾಜಕಾರಣಿಯನ್ನು ಶನಿವಾರ ಭೇಟಿಯಾಗಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನಿಸಿದಾಗ  "ಎಲ್ಲವನ್ನೂ ಸಾರ್ವಜನಿಕವಾಗಿ ಪ್ರಕಟಿಸುವ ಅಗತ್ಯವಿಲ್ಲ" ಎಂದು ಶಾ ನಿಗೂಢವಾಗಿ ಉತ್ತರಿಸಿದರು.

ಪವಾರ್ ನೇತೃತ್ವದ ಎನ್‌ಸಿಪಿ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (ಎಂವಿಎ) ಸಮ್ಮಿಶ್ರ ಸರ್ಕಾರದ ಪಾಲದಾರನಾಗಿದೆ. ತನ್ನದೇ  ಪಕ್ಷದ ರಾಜ್ಯ ಗೃಹ ಸಚಿವ ಅನಿಲ್ ದೇಶ್ ಮುಖ್ ವಿರುದ್ಧ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಮಾಡಿರುವ ಭ್ರಷ್ಟಾಚಾರದ ಆರೋಪಗಳಿಂದ ಎನ್ ಸಿಪಿ ಬೆಚ್ಚಿಬಿದ್ದಿದೆ.

ಗುಜರಾತ್‌ನ ಸ್ಥಳೀಯ ಸುದ್ದಿ ಸಂಸ್ಥೆಗಳ ಪ್ರಕಾರ, ಪವಾರ್ ಮತ್ತು ಅವರ ಪಕ್ಷದ ಸಹೋದ್ಯೋಗಿ ಪ್ರಫುಲ್ ಪಟೇಲ್ ಅವರು ಅಮಿತ್ ಶಾ ಅವರನ್ನು ಅಹಮದಾಬಾದ್‌ನ ತೋಟದ ಮನೆಯಲ್ಲಿ ಶನಿವಾರ ಭೇಟಿಯಾಗಿದ್ದಾರೆ.

ಅಂಬಾನಿ ಪ್ರಕರಣ ಮತ್ತು ದೇಶ್ ಮುಖ್ ವಿರುದ್ಧದ ಆರೋಪಗಳ ಬಗ್ಗೆ ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿಯ ಮಹಾರಾಷ್ಟ್ರ ಸರಕಾರದ ಮೇಲೆ ಬಿಜೆಪಿ ನಿರಂತರ ಒತ್ತಡ ಹೇರುತ್ತಿರುವುದರಿಂದ ಸಭೆಯ ಬಗ್ಗೆ ಶಾ ಅವರು ನಿರಾಕರಿಸಲಿಲ್ಲ ಅಥವಾ ಬಹಿರಂಗವಾಗಿ ಒಪ್ಪಿಕೊಳ್ಳಲೂ ಇಲ್ಲ.

ಶಿವಸೇನೆಯ ಮುಖವಾಣಿ 'ಸಾಮ್ನಾ' ಗೃಹ ಸಚಿವರ ವಿರುದ್ಧದ ಆರೋಪಗಳನ್ನು ಎದುರಿಸಲು ಸರಕಾರ ಅಸಮರ್ಥವಾಗಿದೆ. ಸರಕಾರಕ್ಕೆ ಆಗಿರುವ ಹಾನಿಯನ್ನು ನಿಯಂತ್ರಿಸಲು ಸಾಕಷ್ಟು ಯೋಜನೆ ರೂಪಿಸಿರಲಿಲ್ಲ ಎಂದು ತೀವ್ರವಾಗಿ ಟೀಕಿಸಿದ ಸಮಯದಲ್ಲೇ ಪವಾರ್ ಹಾಗೂ ಶಾ ಭೇಟಿಯ ಕುರಿತು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News