ಹತ್ಯೆ ಪ್ರಕರಣ: ಬಿಎಸ್‌ಪಿ ಶಾಸಕಿಯ ಪತಿ ಬಂಧನ

Update: 2021-03-28 18:05 GMT

ಭೋಪಾಲ್, ಮಾ.28: ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಧ್ಯಪ್ರದೇಶದ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಶಾಸಕಿಯ ಪತಿಯನ್ನು ರವಿವಾರ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

2019ರ ಮಾರ್ಚ್‌ನಲ್ಲಿ ನಡೆದಿದ್ದ ಕಾಂಗ್ರೆಸ್ ಮುಖಂಡ ದೇವೇಂದ್ರ ಚೌರಾಸಿಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪಥಾರಿಯಾ ಕ್ಷೇತ್ರದ ಶಾಸಕಿ ರಮಾಭಾಯಿ ಸಿಂಗ್‌ರ ಪತಿ ಗೋವಿಂದ್ ಸಿಂಗ್‌ನನ್ನು ಬಂಧಿಸಲಾಗಿದೆ. ಭಿಂಡ್ ಗ್ರಾಮದ ಬಸ್ಸು ನಿಲ್ದಾಣದಿಂದ ಗೋವಿಂದ್ ಸಿಂಗ್‌ನನ್ನು ವಶಕ್ಕೆ ಪಡೆಯಲಾಗಿದ್ದು ಸೂಕ್ತ ಕಾರ್ಯವಿಧಾನದ ಬಳಿಕ ಅವರನ್ನು ದಮೋಹಕ್ಕೆ ಕರೆದೊಯ್ಯಲಾಗುವುದು ಎಂದು ವಿಶೇಷ ಕಾರ್ಯಪಡೆಯ ಹೆಚ್ಚುವರಿ ಮಹಾನಿರ್ದೇಶಕ ವಿಪಿನ್ ಮಹೇಶ್ವರಿ ಹೇಳಿದ್ದಾರೆ.

ಹತ್ಯೆ ಪ್ರಕರಣ ನಡೆದು ಒಂದು ವರ್ಷ ಕಳೆದರೂ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರ ವೈಫಲ್ಯದ ಬಗ್ಗೆ ಕಳೆದ ವಾರ ಪೊಲೀಸರನ್ನು ತೀವ್ರವಾಗಿ ತರಾಟೆಗೆತ್ತಿಕೊಂಡಿದ್ದ ಸುಪ್ರೀಂಕೋರ್ಟ್, ತಕ್ಷಣ ಬಂಧಿಸಿ ವರದಿ ಒಪ್ಪಿಸುವಂತೆ ಮಧ್ಯಪ್ರದೇಶ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿತ್ತು. ಈ ಮಧ್ಯೆ ಹೇಳಿಕೆ ನೀಡಿರುವ ಶಾಸಕಿ ರಮಾಬಾಯಿ, ತನ್ನ ಪತಿಯನ್ನು ಬಂಧಿಸಿಲ್ಲ. ಅವರು ತಾವಾಗಿಯೇ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಪತಿಯ ಹೇಳಿಕೆ ಇರುವ ವೀಡಿಯೊ ಬಿಡುಗಡೆ ಮಾಡಿದ್ದು ಅದರಲ್ಲಿ ಗೋವಿಂದ್ ಸಿಂಗ್ ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News