ಸಾಲಿಗ್ರಾಮ: ಅಂತೂ ಇಂತೂ ಮರದ ಸೇತುವೆಗೆ ಮುಕ್ತಿ ಸನ್ನಿಹಿತ

Update: 2021-03-29 16:01 GMT

ಕೋಟ, ಮಾ.29: ಇಲ್ಲಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹೆಗ್ಗಡ್ತಿ ಓಣಿರಸ್ತೆಯಿಂದ ಪಾರಂಪಳ್ಳಿ ಸಂಪರ್ಕಿಸುವ ಹಲವು ವರ್ಷಗಳ ಸೇತುವೆ ನಿರ್ಮಾಣದ ಕನಸು ನನಸಾಗುವ ಕಾಲಘಟ್ಟ ಸನ್ನಿಹಿತವಾದಂತಿದೆ.

ಕಳೆದ ಹಲವಾರು ವರ್ಷಗಳಿಂದ ಮರದ ಸೇತುವೆಯೊಂದು ಸಂಪರ್ಕದ ಕೊಂಡಿಯಾಗಿ ಇಲ್ಲಿದ್ದು, ಸ್ಥಳೀಯರಿಗೆ ಹಲವು ರೀತಿಯಲ್ಲಿ ಸಮಸ್ಯೆಯಾಗಿ ಪರಿಣಮಿಸಿತ್ತು. ಮರದ ಸೇತುವೆ ಬದಲು ಶಾಶ್ವತ ಸೇತುವೆಯೊಂದನ್ನು ನಿರ್ಮಿಸುವಂತೆ ಕೂಗು ಜೋರಾಗಿ ಕೇಳಿಬಂದಿತ್ತು.

ಇದೀಗ ಸ್ಥಳೀಯ ಜನಪ್ರತಿನಿಧಿಗಳ ಒತ್ತಡದ ಮೇರೆಗೆ ಸ್ಥಳೀಯ ಶಾಸಕರ ಮುತುವರ್ಜಿಯಲ್ಲಿ ಸೇತುವೆ ನಿರ್ಮಾಣಕ್ಕೆ ನಾಲ್ಕು ಕೋಟಿ ರೂ.ಗಳ ನೀಲನಕ್ಷೆ ಯೊಂದು ಸಿದ್ಧಗೊಂಡಿದೆ. ಇದರೊಂದಿಗೆ ಬಹುವರ್ಷಗಳ ಬೇಡಿಕೆಗೆ ದಿನಗಣನೆ ಪ್ರಾರಂಭಗೊಂಡಿದೆ.

ಜೀವವನ್ನು ಕೈಯಲ್ಲಿ ಹಿಡಿದು ಸೇತುವೆ ದಾಟಿದರು!

ಸ್ಥಳೀಯ ಕೃಷಿಕರಿಗೆ, ಶಾಲಾ ಮಕ್ಕಳಿಗೆ, ಆಶಾಕಾರ್ಯಕರ್ತರಿಗೆ ಹೀಗೆ ಹಲವು ಮಂದಿಗೆ ಪಾರಂಪಳ್ಳಿ ಸಂಪರ್ಕಿಸಬೇಕಾದರೆ ಮರದ ಸೇತುವೆಯನ್ನೇ ಅವಲಂಬಿಸಬೇಕಿತ್ತು. ಅಪಾಯಕಾರಿಯಾಗಿದ್ದ ಮರದ ಸೇತುವೆಯ ಬಗ್ಗೆ ಸ್ಥಳೀಯರು ಹಲವು ಬಾರಿ ಜನಪ್ರತಿನಿಧಿಗಳಿಗೆ ,ಉದ್ಯಮಿಗಳಿಗೆ, ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ.

ಆದರೂ ಬೆಂಬಿಡದ ಭೂತದಂತೆ ಹೋರಾಟ ನಡೆಸಿ ಸ್ಥಳೀಯ ಪಟ್ಟಣ ಪಂಚಾಯತ್ ಸದಸ್ಯ ರಾಜು ಪೂಜಾರಿ ನೇತೃತ್ವದಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮುತುವರ್ಜಿಯಲ್ಲಿ ಇದೀಗ ಹೊಸ ಸೇತುವೆ ನಿರ್ಮಾಣಕ್ಕೆ ಸರಕಾರದ ಅನುಮೋದನೆ ದೊರಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News