×
Ad

ಶರದ್ ಪವಾರ್- ಅಮಿತ್ ಶಾ ಭೇಟಿಯಾದರೆ ತಪ್ಪೇನಿದೆ: ಸಂಜಯ್ ರಾವತ್

Update: 2021-03-29 23:56 IST

ಮುಂಬೈ, ಮಾ.29: ಎನ್‌ಸಿಪಿ ಮುಖಂಡ ಶರದ್ ಪವಾರ್ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಗುಪ್ತವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನೆಯ ಮುಖಂಡ ಸಂಜಯ್ ರಾವತ್, ಒಂದು ವೇಳೆ ಭೇಟಿಯಾಗಿದ್ದರೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

‘ರಹಸ್ಯ ಸಭೆಯಂತಹ ಏನೂ ನಡೆದಿಲ್ಲ. ಒಂದು ವೇಳೆ ಶಾರನ್ನು ಪವಾರ್ ಭೇಟಿಯಾಗಿದ್ದರೂ ಅದರಲ್ಲಿ ತಪ್ಪೇನೂ ಇಲ್ಲ. ಕೇಂದ್ರ ಸಚಿವರನ್ನು ಬೇರೆ ಪಕ್ಷದ ಮುಖಂಡರು ಭೇಟಿ ಮಾಡಬಾರದು ಎಂದೇನೂ ಇಲ್ಲ’ ಎಂದು ಸಂಜಯ್ ರಾವತ್ ಪ್ರತಿಕ್ರಿಯಿಸಿದ್ದಾರೆ. ಈ ಮಧ್ಯೆ, ಅಹ್ಮದಾಬಾದ್‌ನಲ್ಲಿ ಶರದ್ ಪವಾರ್ ಮತ್ತು ಪ್ರಫುಲ್ ಪಟೇಲ್ ತನ್ನನ್ನು ಭೇಟಿಯಾಗಿದ್ದರು ಎಂಬ ವರದಿಯ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಎಲ್ಲಾ ವಿಷಯಗಳನ್ನೂ ಬಹಿರಂಗಗೊಳಿಸುವಂತಿಲ್ಲ ಎಂದು ಹೇಳಿ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.

ಆದರೆ ಶರದ್ ಪವಾರ್ ಅವರ ಎನ್‌ಸಿಪಿ ಪಕ್ಷ ಮಾತ್ರ ಈ ವರದಿಯನ್ನು ನಿರಾಕರಿಸಿದೆ. ಮಹಾರಾಷ್ಟ್ರದಲ್ಲಿ ಈಗ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಪಕ್ಷಗಳ ಮೈತ್ರಿಕೂಟ ಅಧಿಕಾರದಲ್ಲಿದೆ. ರಾಜ್ಯದ ಗೃಹಸಚಿವ, ಎನ್‌ಸಿಪಿ ಮುಖಂಡ ಅನಿಲ್ ದೇಶ್‌ಮುಖ್ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪ ಮತ್ತು ಸಚಿನ್ ವಾಝೆ ಪ್ರಕರಣವನ್ನು ದೇಶ್‌ಮುಖ್ ನಿರ್ವಹಿಸುತ್ತಿರುವ ರೀತಿಯ ಬಗ್ಗೆ ಈಗ ಮೈತ್ರಿಕೂಟದ ಪಕ್ಷಗಳೊಳಗೆ ಅಸಮಾಧಾನ ಹೊಗೆಯಾಡುತ್ತಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News