ದೆಹಲಿ : 76 ವರ್ಷಗಳಲ್ಲಿ ಗರಿಷ್ಠ ತಾಪಮಾನ
ಹೊಸದಿಲ್ಲಿ : ರಾಜಧಾನಿ ದೆಹಲಿ ಅಕ್ಷರಶಃ ಕೆಂಡವಾಗಿದ್ದು, 40.1 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದೆ. ಕಳೆದ 76 ವರ್ಷಗಳ ಇತಿಹಾಸದಲ್ಲೇ ಮಾರ್ಚ್ ತಿಂಗಳಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶ ಇದಾಗಿದೆ ಎಂದು ಭಾರತದ ಹವಾಮಾನ ಇಲಾಖೆ ಪ್ರಕಟಿಸಿದೆ.
ಸಫ್ದರ್‌ಜಂಗ್ ಹವಾಮಾನ ವೀಕ್ಷಣಾಲಯದಲ್ಲಿ ಗರಿಷ್ಠ 40.1 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದೆ. ಇದು ವಾಡಿಕೆ ಉಷ್ಣಾಂಶಕ್ಕಿಂತ ಎಂಟು ಅಂಶಗಳಷ್ಟು ಅಧಿಕ ಎಂದು ಹವಾಮಾನ ಇಲಾಖೆ ಪ್ರಾದೇಶಿಕ ಮುನ್ಸೂಚನಾ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಹೇಳಿದ್ದಾರೆ.
"ರಾಜಧಾನಿಯಲ್ಲಿ 40.5 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದ್ದ 1945ರ ಮಾರ್ಚ್ 31ನ್ನು ಹೊರತುಪಡಿಸಿದರೆ ಇದು ಮಾರ್ಚ್ ತಿಂಗಳ ಅತ್ಯಂತ ಗರಿಷ್ಠ ತಾಪಮಾನವಾಗಿದೆ. ಗಾಳಿಯ ವೇಗ ಕಡಿಮೆಯಾಗಿರುವುದು ಮತ್ತು ಕಳೆದ ನಾಲ್ಕೈದು ದಿನಗಳಿಂದ ಶುಭ್ರ ಆಕಾಶದ ಹಾಗೂ ಅತ್ಯಧಿಕ ಬಿಸಿಲು ಇದ್ದಿರುವುದು ಉಷ್ಣಾಂಶ ಏರಿಕೆಗೆ ಕಾರಣ ಎಂದು ಅವರು ವಿವರಿಸಿದ್ದಾರೆ.
1973ರ ಮಾರ್ಚ್ 29ರಂದು ಮಾರ್ಚ್ ತಿಂಗಳ ಮೂರನೇ ಗರಿಷ್ಠ ತಾಪಮಾನ 39.6 ಡಿಗ್ರಿ ಸೆಲ್ಷಿಯಸ್ ದಾಖಲಾಗಿತ್ತು.
ನಜಾಫ್‌ಗಢ, ನರೇಲಾ, ಪೀತಂಪುರ ಮತ್ತು ಪುಸಾ ಹವಾಮಾನ ಕೇಂದ್ರಗಳಲ್ಲಿ ಕ್ರಮವಾಗಿ 41.8, 41.7, 41.6 ಮತ್ತು 41.5 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದೆ. ನಗರದ ಕನಿಷ್ಠ ತಾಪಮಾನ 20.6 ಡಿಗ್ರಿ ಸೆಲ್ಷಿಯಸ್ ದಾಖಲಾಗಿದ್ದು, ಇದು ವಾಡಿಕೆಗಿಂತ 3 ಅಂಶಗಳಷ್ಟು ಅಧಿಕ.