ಬಿಜೆಪಿ ಕಚೇರಿಯಲ್ಲೇ ವ್ಯಕ್ತಿಗೆ ಹೊಡೆದ ಕೇಂದ್ರ ಸಚಿವ !

Update: 2021-03-30 04:18 GMT

ಕೊಲ್ಕತ್ತಾ: ಬಿಜೆಪಿ ಕಚೇರಿಯಲ್ಲೇ ವ್ಯಕ್ತಿಯೊಬ್ಬರನ್ನು ಥಳಿಸಿದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ರಾಜ್ಯ ಸಚಿವ ಬಬೂಲ್ ಸುಪ್ರಿಯೊ, ಮೈಮೇಲೆ ವಿವಾದ ಎಳೆದುಕೊಂಡಿದ್ದಾರೆ. ಈ ಗಾಯಕ, ರಾಜಕಾರಣಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೋಲಿಗಂಜ್ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ.

ಕೇವಲ ಟಿವಿ ಕ್ಯಾಮೆರಾ ಮುಂದೆ ಪೋಸ್ ನೀಡುವುದು ಮತ್ತು ಬೈಟ್‌ಗಳನ್ನು ಕೊಡುವ ಬದಲು ಕ್ಷೇತ್ರದಲ್ಲಿ ಗಂಭೀರ ಪ್ರಚಾರ ಕೈಗೊಳ್ಳಿ ಎಂದು ಪದೇ ಪದೇ ಸುಪ್ರಿಯೊ ಅವರಿಗೆ ಸಲಹೆ ಮಾಡಿದ ವ್ಯಕ್ತಿಯನ್ನು ಬಿಜೆಪಿ ಕಚೇರಿಯಲ್ಲೇ ಥಳಿಸಿರುವ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

"ನಾನು ಆ ವ್ಯಕ್ತಿಗೆ ಹೊಡೆದಿಲ್ಲ; ಹೊಡೆಯುವ ರೀತಿಯಲ್ಲಿ ಸನ್ನೆ ಮಾಡಿದೆ" ಎಂದು ಸುಪ್ರಿಯೋ ಹೇಳಿಕೊಂಡಿದ್ದಾರೆ. ತೋಲಿಗುಂಜ್ ಕ್ಷೇತ್ರದ ರಾಣಿಕುಂತಿ ಬಿಜೆಪಿ ಕಚೇರಿಯಲ್ಲಿ ಈ ಘಟನೆ ನಡೆದಿದೆ. ದೋಲ್‌ಜಾತ್ರಾ ಹಬ್ಬ ಸಂಬಂಧ ಏರ್ಪಡಿಸಿದ್ದ ಸಮಾರಂಭ ವೊಂದರಲ್ಲಿ ಭಾಗವಹಿಸಲು ಸುಪ್ರಿಯೊ ಆಗಮಿಸಿದ್ದರು.

ಗಂಭೀರ ಪ್ರಚಾರ ಕೈಗೊಳ್ಳುವಂತೆ ವ್ಯಕ್ತಿ ಸಲಹೆ ಮಾಡಿದಾಗ, ಮೊದಲು ತೆಪ್ಪಗಿರುವಂತೆ ಆ ವ್ಯಕ್ತಿಯನ್ನು ಸುಪ್ರಿಯೊ ಗದರಿದರು. ಆ ವ್ಯಕ್ತಿ ಮತ್ತೆ ಮತ್ತೆ ಇದೇ ಸಲಹೆ ಮಾಡಿದರು ಎಂದು ಬಿಜೆಪಿ ಮೂಲಗಳು ಹೇಳಿವೆ. ಒಮ್ಮೆ ತಾಳ್ಮೆ ಕಳೆದುಕೊಂಡ ಸಚಿವ ಆ ವ್ಯಕ್ತಿಯನ್ನು ಹೊಡೆಯುತ್ತಿರುವುದು ವೀಡಿಯೊದಲ್ಲಿ ಕಂಡುಬರುತ್ತಿದೆ.

"ಜನ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಕೆಲವರು ದ್ರೋಹಿಗಳು ಅಥವಾ ಮೀರ್‌ಜಾಫರ್‌ಗಳೂ ಇರುತ್ತಾರೆ. ಕೆಲ ವ್ಯಕ್ತಿಗಳು ತೊಂದರೆಗಳನ್ನು ಸೃಷ್ಟಿಸುವ ಸಲುವಾಗಿಯೇ ಇರುತ್ತಾರೆ. ಪ್ರಚೋದನೆಯ ನಡುವೆಯೂ ನಾನು ತಣ್ಣಗಿದ್ದೆ" ಎಂದು ಸುಪ್ರಿಯೊ ಹೇಳಿದ್ದಾರೆ. ಆದರೆ ಏಟು ತಿಂದ ವ್ಯಕ್ತಿ ಬೇರೆ ಪಕ್ಷದಿಂದ ಬಂದವರೇ ಅಥವಾ ಬಿಜೆಪಿ ಕಾರ್ಯಕರ್ತರೇ ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News