ಬಿಜೆಪಿ ವಿರುದ್ಧ ನಾವೆಲ್ಲ ಒಂದಾಗಬೇಕು: ಸೋನಿಯಾ ಗಾಂಧಿ, ಮತ್ತಿತರರಿಗೆ ಪತ್ರ ಬರೆದ ಮಮತಾ ಬ್ಯಾನರ್ಜಿ

Update: 2021-03-31 11:02 GMT

ಹೊಸದಿಲ್ಲಿ: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ 10 ವಿರೋಧ ಪಕ್ಷಗಳ ಮುಖಂಡರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದಾರೆ. ಸದ್ಯದ ವಿಧಾನಸಭಾ ಚುನಾವಣೆಯ ಬಳಿಕ ನಾವೆಲ್ಲರೂ ಬಿಜೆಪಿ ವಿರುದ್ಧ ಒಗ್ಗೂಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲಿನ  ದಾಳಿಯ ವಿರುದ್ಧ ಒಂದಾಗಿ ಪರಿಣಾಮಕಾರಿ ಹೋರಾಟ ನಡೆಸಬೇಕು  ಮತ್ತು ಭಾರತದ ಜನರಿಗೆ ವಿಶ್ವಾಸಾರ್ಹವಾದ ಪರ್ಯಾಯವೊಂದನ್ನು ಪ್ರಸ್ತುತಪಡಿಸುವ ಸಮಯ ಬಂದಿದೆ ಎಂದು ಏಳು ಅಂಶಗಳ ಪತ್ರದಲ್ಲಿ ತಿಳಿಸಲಾಗಿದೆ.

ಸದ್ಯದ ವಿವಾದಾತ್ಮಕ ಕಾನೂನಾಗಿರುವ ದಿಲ್ಲಿಯ ಲೆಫ್ಟಿನೆಂಟ್‌ ಗೆ ಹೆಚ್ಚಿನ ಅಧಿಕಾರ ನೀಡುವ ಕ್ರಮವನ್ನು ಪತ್ರದಲ್ಲಿ ಖಂಡಿಸಲಾಗಿದ್ದು, ಇದು ಪ್ರಜಾಪ್ರಭುತ್ವದ ಮೇಲಿನ ಆಕ್ರಮಣ ಎಂದು ಬಣ್ಣಿಸಿದ್ದಾರೆ. ಬಿಜೆಪಿಯನ್ನು ಹೊರತುಪಡಿಸಿದ ಪಕ್ಷಗಳು ತಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಬಾರದು ಎಂದು ಬಿಜೆಪಿ ಬಯಸಿದೆ. ಇದು ರಾಝ್ಯ ಸರ್ಕಾರಗಳನ್ನು ದುರ್ಬಲಗೊಳಿಸಿ ಅದನ್ನು ಕೇವಲ ಪುರಸಭೆಗೆ ಸೀಮಿತಗೊಳಿಸಲು ಪ್ರಯತ್ನಿಸುತ್ತಿದೆ. ಸಂಕ್ಷಿಪ್ತವಾಗಿ, ಬಿಜೆಪಿಯು ಒಂದು ಪಕ್ಷದ ಸರ್ವಾಧಿಕಾರವನ್ನು ಭಾರತದಲ್ಲಿ ಸ್ಥಾಪಿಸಲು ಬಯಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

"ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಬಿಜೆಪಿಯು ನಡೆಸುತ್ತಿರುವ ದಾಳಿಯ ವಿರುದ್ಧ ಏಕೀಕೃತ ಮತ್ತು ಪರಿಣಾಮಕಾರಿ ಹೋರಾಟ ನಡೆಸುವ ಸಮಯ ಬಂದಿದೆ ಎಂದು ಬಲವಾಗಿ ನಂಬುತ್ತೇನೆ. ಟಿಎಂಸಿ ಪಕ್ಷದ ಅಧ್ಯಕ್ಷೆಯಾಗಿ ಈ ಯುದ್ಧದಲ್ಲಿ ನಾನು ಸಮಾನ ಮನಸ್ಕ ಪಕ್ಷಗಳೊಂದಿಗೆ ಪೂರ್ಣ ಹೃದಯದೊಂದಿಗೆ ಕಾರ್ಯ ನಿರ್ವಹಿಸುತ್ತೇನೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಸೋನಿಯಾ ಗಾಂಧಿಯವರಲ್ಲದೆ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್, ಡಿಎಂಕೆ ಸ್ಟಾಲಿನ್, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ, ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್, ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್, ಸಮಾಜವಾದಿ ರಾಷ್ಟ್ರೀಯ ಜನ ದಳದ ತೇಜಸ್ವಿ ಯಾದವ್ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಗೆ ಪತ್ರವನ್ನು ಕಳುಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News