ಆಂಧ್ರ, ತೆಲಂಗಾಣದ ಹಲವು ವಕೀಲರು, ಹೋರಾಟಗಾರರು, ಪತ್ರಕರ್ತರ ನಿವಾಸ, ಕಚೇರಿಗಳ ಮೇಲೆ ಎನ್‍ಐಎ ದಾಳಿ

Update: 2021-04-01 17:49 GMT

ಹೊಸದಿಲ್ಲಿ, ಎ.1: ಮಾವೋವಾದಿಗಳ ಜೊತೆ ನಂಟು ಹೊಂದಿದ್ದಾರೆಂದು ಆರೋಪಿಸಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ 25ಕ್ಕೂ ಅಧಿಕ ಮಂದಿ ಮಾನವಹಕ್ಕು, ದಲಿತ, ಮಹಿಳಾ ಹಾಗೂ ಆದಿವಾಸಿ ಹಕ್ಕುಗಳ ಹೋರಾಟಗಾರರ ನಿವಾಸಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಮಾರ್ಚ್ 31ರಂದು ಏಕಕಾಲದಲ್ಲಿ ದಾಳಿ ನಡೆಸಿದೆ.

ಬುಧವಾರ ಆರಂಭವಾದ ಎನ್‌ಐಎ ದಾಳಿ ಕಾರ್ಯಾಚರಣೆಯು ಗುರುವಾರ ಮುಂಜಾನೆಯವರೆಗೂ ಮುಂದುವರಿಯಿತೆಂದು ನಾಗರಿಕ ಸ್ವಾತಂತ್ರಗಳ ಜನತಾ ಒಕ್ಕೂಟ (ಪಿಯುಸಿಎಲ್) ಹೇಳಿದೆ. ಎನ್‌ಐಎ ಅಧಿಕಾರಿಗಳು, ಸಾಮಾಜಿಕ, ಮಾನ ವಹಕ್ಕುಗಳ ಹೋರಾಟಗಾರರ ನಿವಾಸದಿಂದ ಫೋನ್, ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು, ಪುಸ್ತಕಗಳು ಹಾಗೂ ದಾಖಲೆಪತ್ರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆಂದು ಅದು ಹೇಳಿದೆ.

ತೆಲಂಗಾಣ ಹೈಕೋರ್ಟ್ ನ್ಯಾಯವಾದಿ ಹಾಗೂ ಆಂಧ್ರಪ್ರದೇಶ ನಾಗರಿಕ ಸ್ವಾತಂತ್ರಗಳ ಸಮಿತಿಯ ಜೊತೆ ನಂಟು ಹೊಂದಿರುವ ರಘುನಾಥ್ ವೆರೋಸ್, ಜನ ನಾಟ್ಯ ಮಂಡಳಿಯ ಸದಸ್ಯ ಡಪ್ಪು ರಮೇಶ್, ಮಾನವಹಕ್ಕುಗಳ ವೇದಿಕೆಯ ಕಾರ್ಯಕರ್ತ ವಿ.ಎಸ್.ಕೃಷ್ಣ ಮತ್ತು ಕ್ರಾಂತಿಕಾರಿ ಬರಹಗಾರರ ಸಂಘದ ಪಾಣಿ, ವರಲಕ್ಷ್ಮಿ ಹಾಗೂ ಅರುಣ್ ಅವರಲ್ಲಿ ಪ್ರಮುಖರು ಎಂದು ಪಿಯುಸಿಎಲ್ ಹೇಳಿದೆ..

ಚೈತನ್ಯ ಮಹಿಳಾ ಸಂಘದ ದೇವೇಂದ್ರ, ಶಿಲ್ಪಾ, ಸ್ವಪ್ನಾ, ರಾಜೇಶ್ವರಿ ಹಾಗೂ ಪದ್ಮಾ, ಆಂಧ್ರಪ್ರದೇಶ ನಾಗರಿಕ ಸ್ವಾತಂತ್ರ್ಯಗಳ ಸಮಿತಿಯ ಚಿಲಿಕಾ ಚಂದ್ರಶೇಖರ, ರಘುನಾಥ ಹಾಗೂ ಚಿಟ್ಟಿಬಾಬು, ಮಾನವಹಕ್ಕುಗಳ ವೇದಿಕೆಯ ಕೃಷ್ಣ, ಅಮರುಲಾ ಬಂಧು ಮಿತ್ರುಲಾ ಸಂಘಂನ ಸಿರಿಶಾ ಹಾಗೂ ನ್ಯಾಯವಾದಿ ಕೆ.ಎಸ್.ಚೇಲಂ ಅವರ ನಿವಾಸಗಳ ಮೇಲೂ ದಾಳಿ ನಡೆದಿರುವುದಾಗಿ ಪಿಯುಸಿಎಲ್ ತಿಳಿಸಿದೆ.

ಮಾವೋವಾದಿಗಳ ಜೊತೆ ಸಂಪರ್ಕ ಹೊಂದಿದ್ದಾನೆಂದು ಆರೋಪಿಸಲಾಗಿರುವ ಪತ್ರಕರ್ತ ಪರಾಂಗಿ ನಾಗಣ್ಣ ಅವರನ್ನು ಆಂಧ್ರಪ್ರದೇಶದ ವಿಶಾಖಪಟ್ಟಣಂ ಗ್ರಾಮಾಂತರ ಜಿಲ್ಲೆಯಲ್ಲಿ ಬಂಧಿಸಿದ ಬಳಿಕ ಎನ್‌ಐಎ ಈ ದಾಳಿಗಳನ್ನು ನಡೆಸಿದೆ.

ನಾಗಣ್ಣ ಮಾವೋವಾದಿ ಸಾಹಿತ್ಯ, ವಯರ್‌ಗಳ ಕಂತೆಗಳು ಹಾಗೂ ಔಷಧಿಗಳನ್ನು ಒಯ್ಯುತ್ತಿದ್ದನೆಂದು ಪೊಲೀಸರು ಆರೋಪಿಸಿದ್ದಾರೆ. ಉನ್ನತ ಮಾವೋವಾದಿ ನಾಯಕರು ಹಾಗೂ ನಾಗರಿಕ ಹಕ್ಕುಗಳ ಸಂಘಟನೆಗಳ ನಡುವೆ ಮಾತುಕತೆಗಳಿಗೆ ತಾನು ಮಧ್ಯಸ್ಥಿಕೆ ವಹಿಸಿದ್ದಾಗಿ ನಾಗಣ್ಣ ವಿಚಾರಣೆಯ ವೇಳೆ ತಿಳಿಸಿದ್ದಾನೆಂದು ಪೊಲೀಸರು ಹೇಳಿಕೊಂಡಿದ್ದಾರೆ

ಎನ್‌ಐಎ ದಾಳಿಯನ್ನು ಪಿಯುಸಿಎಲ್ ತೀವ್ರವಾಗಿ ಖಂಡಿಸಿದ್ದು ಸರಕಾರವು ಸಾಮಾಜಿಕ ಕಾರ್ಯಕರ್ತರನ್ನು ಬೇಟೆಯಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಈ ಎಲ್ಲಾ ಹೋರಾಟಗಾರರು ಭಾರತ ಸರಕಾರ ಮತ್ತು ಆಂಧ್ರ, ತೆಲಂಗಾಣ ರಾಜ್ಯ ಸರಕಾರಗಳ ಪ್ರಜಾಪ್ರಭುತ್ವ ವಿರೋಧಿ ಕಾನೂನುಗಳನ್ನು ಪ್ರಶ್ನಿಸುತ್ತಿದ್ದರು. ಮಹಿಳೆಯರ ವಿರುದ್ಧ ಜಾತಿ ಹಾಗೂ ಪಿತೃಪ್ರದಾನ ಸಮಾಜದ ಹಿಂಸಾಚಾರಗಳನ್ನು, ಮುಸ್ಲಿಮರ ವಿರುದ್ಧ ಕೇಸರಿ ಶಕ್ತಿಗಳ ದಾಳಿಗಳನ್ನು, ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ನಾಶವನ್ನು ಮತ್ತು ಜನರ ಭೂ ಹಾಗೂ ಕಾಡಿನ ಹಕ್ಕುಗಳ ರಕ್ಷಣೆಗಾಗಿ ಹೋರಾಡುತ್ತಿದ್ದರು ಎಂದು ಪಿಯುಸಿಎಲ್ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಅತ್ಯಾಚಾರ ಸಂತ್ರಸ್ತೆಯರ ಪರ ಹೋರಾಟಗಾರ ಎಸ್.ವಿ.ಕೃಷ್ಣರನ್ನು ಬೆದರಿಸಲು ಎನ್‌ಐಎ ಯತ್ನ: ಮಾನವಹಕ್ಕುಗಳ ವೇದಿಕೆ ಆರೋಪ

  2007ರಿಂದ ವಕಾಪಲ್ಲಿ ಅತ್ಯಾಚಾರ ಸಂತ್ರಸ್ತರ ಪರವಾಗಿ ಹೋರಾಟ ನಡೆಸುತ್ತಿರು ಮಾನವಹಕ್ಕು ಹೋರಾಟಗಾರ ವಿ.ಎಸ್.ಕೃಷ್ಣ ಅವರನ್ನು ಬೆದರಿಸಲು ಎನ್‌ಐಎ ದಾಳಿ ನಡೆಸಿರುವುದಾಗಿ ಮಾನವಹಕ್ಕುಗಳ ವೇದಿಕೆ ಆರೋಪಿಸಿದೆ. ವಿ.ಎಸ್.ಕೃಷ್ಣ ಅವರು ಮಾನವಹಕ್ಕು ವೇದಿಕೆಯ ಸಮನ್ವಯಕಾರರಾಗಿದ್ದಾರೆ.

ಆಂಧ್ರಪ್ರದೇಶ ಪೊಲೀಸ್ ಪಡೆಯ ಗ್ರೇಹೌಂಡ್ ದಳದ ಸಿಬ್ಬಂದಿಗಳ ವಿರುದ್ಧ ಸುಳ್ಳು ಸಾಕ್ಷ ನೀಡುವಂತೆ ಕೃಷ್ಣ ಅವರು ಅತ್ಯಾಚಾರ ಸಂತ್ರಸ್ತೆಯರಿಗೆ ಕುಮ್ಮಕ್ಕು ನೀಡಿದ್ದರೆಂದು ಎನ್‌ಐಎ ಆರೋಪಿಸಿದೆ.

 2007ರಲ್ಲಿ ನಡೆದ ವಕಪಲ್ಲಿ ಅತ್ಯಾಚಾರ ಪ್ರಕರಣದಲ್ಲಿ 13 ಗ್ರೇಹೌಂಡ್ ಸಿಬ್ಬಂದಿ ವಕಾಪಲ್ಲಿ ಬುಡಕಟ್ಟು ಗ್ರಾಮದ ಮೇಲೆ ದಾಳಿ ನಡೆಸಿ 11 ಮಂದಿ ಆದಿವಾಸಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿತ್ತೆಂದು ಆರೋಪಿಸಲಾಗಿತ್ತು.ಪ್ರಕರಣದ ವಿಚಾರಣೆಯನ್ನು ವಿಶಾಖಪಟ್ಟಣಂನ ಎಸ್‌ಸಿ/ಎಸ್‌ಟಿ ವಿಶೇಷ ನ್ಯಾಯಾಲಯ ನಡೆಸುತ್ತಿದೆ 13 ಆರೋಪಿ ಪೊಲೀಸರ ವಿರುದ್ಧ ವಿಚಾರಣೆ ನಡೆಯುತ್ತಿದ್ದು, 11 ಸಂತ್ರಸ್ತೆಯರ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News