ಆಕ್ಸಿಜನ್ ಮಾಸ್ಕ್ ನೊಂದಿಗೆ ಧರಣಿ ನಡೆಸಿದ ಗಂಟೆಗಳ ಬಳಿಕ ಕೋವಿಡ್ ರೋಗಿ ಮೃತ್ಯು
ಮುಂಬೈ:ಹಲವು ಆಸ್ಪತ್ರೆಗಳು ತನ್ನನ್ನು ದಾಖಲಿಸಿಕೊಳ್ಳಲು ನಿರಾಕರಿಸಿದವು ಎಂದು ಆರೋಪಿಸಿ 38 ವರ್ಷದ ಕೊರೋನ ವೈರಸ್ ರೋಗಿಯೊಬ್ಬರು ಮಹಾರಾಷ್ಟ್ರದ ನಾಸಿಕ್‌ನ ಮಹಾನಗರ ಪಾಲಿಕೆಯ ಹೊರಗೆ ಆಕ್ಸಿಜನ್ ಮಾಸ್ಕ್ ನೊಂದಿಗೆ ಧರಣಿ ನಡೆಸಿದ್ದು, ಗುರುವಾರ ರಾತ್ರಿ 1ರ ಸುಮಾರಿಗೆ ಅವರು ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ.
ನಿನ್ನೆ ಸಂಜೆ ಸಿಲಿಂಡರ್‌ಗೆ ಸಂಪರ್ಕ ಹೊಂದಿದ ಆಕ್ಸಿಜನ್ ಮಾಸ್ಕ್ ಧರಿಸಿ ಬಾಬಾ ಸಾಹೇಬ್ ಕೋಲೆ ಎಂಬ ಹೆಸರಿನ ಕೋವಿಡ್ ರೋಗಿಯು ಮಹಾನಗರ ಪಾಲಿಕೆಯ ಮುಖ್ಯಕಚೇರಿಯ ಹೊರಗೆ ಧರಣಿ ನಡೆಸುತ್ತಿರುವುದು ಕಂಡುಬಂದಿತ್ತು.
ಸುಮಾರು ಒಂದು ಗಂಟೆಯ ನಂತರ, ನಗರ ಪಾಲಿಕೆಯ ಆಂಬ್ಯುಲೆನ್ಸ್ ಬಾಬಾ ಸಾಹೇಬ್ ಅವರನ್ನು ಮುನ್ಸಿಪಲ್ ಆಸ್ಪತ್ರೆಗೆ ಕರೆದೊಯ್ಯಿತು.
ಅವರ ಕುಟುಂಬ ಸದಸ್ಯರ ಪ್ರಕಾರ, ಮಧ್ಯರಾತ್ರಿಯಲ್ಲಿ, ಬಾಬಾಸಾಹೇಬ್ ಅವರ ಆಮ್ಲಜನಕದ ಮಟ್ಟವು ಶೇಕಡಾ 40 ಕ್ಕೆ ತಲುಪಿತು. ಸಾಮಾನ್ಯವಾಗಿ ಆಮ್ಲಜನಕ ಮಟ್ಟವು ಶೇಕಡಾ 95 ಅಥವಾ ಅದಕ್ಕಿಂತ ಹೆಚ್ಚಿರುತ್ತದೆ.
"ಎರಡು-ಮೂರು ದಿನಗಳ ಹಿಂದೆ ಬಾಬಾಸಾಹೇಬ್ ಅವರನ್ನು ಬೈಟ್ಕೊ (ಆಸ್ಪತ್ರೆ) ಗೆ ಕರೆದೊಯ್ಯಲಾಯಿತು. ಅಲ್ಲಿಂದ ಅವರು ಮತ್ತೊಂದು ಆಸ್ಪತ್ರೆಗೆ ತೆರಳಿದರು. ಅಲ್ಲಿಂದ ಸರಕಾರಿ ವೈದ್ಯಕೀಯ ಕಾಲೇಜಿಗೆ ಹೋದರು. ವೈದ್ಯಕೀಯ ಕಾಲೇಜು ಹಾಸಿಗೆ ಇಲ್ಲ ಎಂದು ಹೇಳಿತು.. ನಾವು ಬಹಳಷ್ಟು ಆಸ್ಪತ್ರೆಗಳಿಗೆ ಹೋದೆವು. ಯಾರೂ ಅವರನ್ನು ದಾಖಲಿಸಿಕೊಳ್ಳಲಿಲ್ಲ. ನಂತರ ನಾವು ಸಿವಿಲ್ (ಆಸ್ಪತ್ರೆ) ಗೆ ಹಿಂತಿರುಗಿ ಅವರಿಗೆ ಆಮ್ಲಜನಕವನ್ನು ತೆಗೆದುಕೊಂಡೆವು. ಯಾರೂ ನಮ್ಮ ಮಾತನ್ನು ಕೇಳಲಿಲ್ಲ"ಎಂದು ಬಾಬಾಸಾಹೇಬ್ ಅವರ ಪತ್ನಿ ಸ್ಥಳೀಯ ಪತ್ರಕರ್ತರಿಗೆ ತಿಳಿಸಿದರು.
ಹಲವು ಆಸ್ಪತ್ರೆಗೆ ಅಲೆದಾಡಲು ರೋಗಿಯನ್ನು ಯಾರು "ಪ್ರಚೋದಿಸಿದರು" ಎಂದು ಕಂಡುಹಿಡಿಯಲು ತನಿಖೆಯನ್ನು ಪ್ರಾರಂಭಿಸಿದ್ದೇವೆ ಎಂದು ಪೊಲೀಸರು ಮತ್ತು ಕಾಪೋರೇಶನ್ ಹೇಳಿವೆ
ಮಹಾರಾಷ್ಟ್ರವು ಕೊರೋನವೈರಸ್ ಸೋಂಕಿನ ಹೊಸ ಅಲೆಯೊಂದಿಗೆ ಹೋರಾಡುತ್ತಿದೆ, ಇದು ರಾಜ್ಯದ ಹಲವು ಕಡೆಗಳಲ್ಲಿ ಆರೋಗ್ಯ ಮೂಲ ಸೌಕರ್ಯದ ಮೇಲೆ ಪ್ರಭಾವಬೀರಿದೆ.