ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಿದ ಚುನಾವಣಾ ಆಯೋಗ: ಮರು ಚುನಾವಣೆ ನಡೆಸಲು ಆದೇಶ

Update: 2021-04-02 18:04 GMT

ಗುವಾಹಟಿ: ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆಯು ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿಯೋರ್ವರ ಕಾರಿನಲ್ಲಿ ಮತಯಂತ್ರ ಮತ್ತು ವಿವಿಪ್ಯಾಟ್‌ ಪತ್ತೆಯಾಗಿರುವುದು ಸದ್ಯ ವಿವಾದ ಸೃಷ್ಟಿಸಿದೆ. ಈ ಪ್ರಕರಣದ ಬಗ್ಗೆ ಹಿಂಸಾಚಾರವೂ ಪ್ರಾರಂಭವಾಗಿತ್ತು. ಇದೀಗ ಈ ಕುರಿತಾದಂತೆ ಚುನಾವಣಾ ಆಯೋಗವು ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಿದೆ ಎಂದು ತಿಳಿದು ಬಂದಿದೆ. 

ಇವಿಎಂ ಸಾಗಾಟ ಪ್ರಕ್ರಿಯೆಯನ್ನು ಉಲ್ಲಂಘಿಸಿದ್ದಕ್ಕಾಗಿ ಅಲ್ಲಿನ ಪ್ರಮುಖ ಅಧಿಕಾರಿಗೆ ಶೋಕಾಸ್ ನೋಟೀಸ್‌ ಹೊರಡಿಸಲಾಗಿದೆ. ಅಲ್ಲದೇ, ಪೋಲ್‌ ಸಂಖ್ಯೆ ೧೪೯ ರಥಾಬರಿಯ ಇಂದಿರಾ ಎಂವಿ ಸ್ಕೂಲ್‌ ನಲ್ಲಿ ಮರು ಚುನಾವಣೆ ನಡೆಸಲಾಗುವುದು ಎಂದೂ ಚುನಾವಣೆ ಆಯೋಗ ಹೇಳಿಕೆ ನೀಡಿದ್ದಾಗಿ ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

"ಇವಿಎಂ ಮತ್ತು ವಿವಿಪ್ಯಾಟ್‌ ಸುಸ್ಥಿತಿಯಲ್ಲಿದ್ದು, ಸೀಲ್‌ ಗಳನ್ನು ತೆರೆದಿಲ್ಲ. ಎಲ್ಲವನ್ನೂ ಸ್ಟ್ರಾಂಗ್‌ ರೂಮ್‌ ಗೆ ಸಾಗಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದ್ದಾಗಿ ವರದಿಯಲ್ಲಿ ಉಲ್ಲೇಖಿಸಿದೆ.

ಚುನಾವಣಾ ಆಯೋಗದ ಹೇಳಿಕೆ

ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಚುನಾವಣಾ ಆಯೋಗ ‘ಗುರುವಾರ ರಾತ್ರಿ ಸುಮಾರು 9 ಗಂಟೆಯ ವೇಳೆಗೆ 149ನೇ ಮತಟ್ಟೆಯಿಂದ ಇವಿಎಂಗಳನ್ನು ಭದ್ರತಾ ಕೊಠಡಿಗೆ ಸಾಗಿಸಲು ಖಾಸಗಿ ವಾಹನವನ್ನು ಮತಗಟ್ಟೆ ಅಧಿಕಾರಿ ಬಳಸಿದ್ದು ಈ ಸಂದರ್ಭ ವಾಹನದ ಮಾಲಕತ್ವದ ಬಗ್ಗೆ ಅವರು ಪರಿಶೀಲಿಸಿಲ್ಲ. ಅವರು ವರದಿ ಮಾಡಿರುವಂತೆ, ರಾತ್ರಿ 11 ಗಂಟೆಗೆ ಕರೀಮ್‌ಗಂಜ್‌ನ ಕನೈಶಿಲ್ ಎಂಬಲ್ಲಿ ತಲುಪಿದಾಗ ವಾಹನದ ದಟ್ಟಣೆಯಿಂದ ಟ್ರಾಫಿಕ್ ಜಾಂ ಆಗಿದ್ದು ವಾಹನ ನಿಧಾನವಾಗಿ ಚಲಿಸಿದೆ. ವಾಹನ ನಿಧಾನವಾಗುತ್ತಿದ್ದಂತೆಯೇ, ಸುಮಾರು 50 ಮಂದಿಯಿದ್ದ ಗುಂಪೊಂದು ವಾಹನವನ್ನು ಸುತ್ತುವರಿದಿದೆ. ವಾಹನದಲ್ಲಿದ್ದವರನ್ನು ಬಯ್ಯತೊಡಗಿದ ಗುಂಪು ವಾಹನ ಮುಂದೆ ಸಾಗಲು ಅವಕಾಶ ನೀಡಲಿಲ್ಲ. ಆಗ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ‘ ಈ ವಾಹನ ಬಿಜೆಪಿ ಅಭ್ಯರ್ಥಿ ಕೃಷ್ಣೇಂದು ಪಾಲ್‌ಗೆ ಸೇರಿದ್ದು. ಇವಿಎಂ ತಿರುಚಲು ಬಿಜೆಪಿ ಪ್ರಯತ್ನಿಸುತ್ತಿದ್ದು ಅದಕ್ಕಾಗಿ ಇವಿಎಂ ಕೊಂಡೊಯ್ಯಲಾಗುತ್ತಿದೆ’ ಎಂದು ಹೇಳಿದೆ.

ಆಗ ವಾಹನದಲ್ಲಿದ್ದವರು ಮೇಲಧಿಕಾರಿಗೆ ಮಾಹಿತಿ ನೀಡಿದ್ದಾರೆ’ ಎಂದು ಚುನಾವಣಾ ಆಯೋಗ ಹೇಳಿದೆ. ಕ್ರಮೇಣ ಇನ್ನಷ್ಟು ಜನ ಸೇರಿದ್ದು ವಾಹನದಲ್ಲಿದ್ದವರನ್ನು ಅಲ್ಲಿಂದ ಹೋಗಲು ಬಿಡಲಿಲ್ಲ ಮತ್ತು ಅವರ ಮೇಲೆ ದಾಳಿ ನಡೆಸಿದೆ. ಆದರೆ ಇವಿಎಂಗೆ ಹಾಕಿದ್ದ ಸೀಲ್ ಹಾಗೆಯೇ ಇತ್ತು ಮತ್ತು ಯಾವುದೇ ಹಾನಿಯಾಗಿಲ್ಲ ಎಂದು ಆಯೋಗ ಹೇಳಿಕೆ ನೀಡಿದೆ. ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ಇವಿಎಂ ಪತ್ತೆಯಾದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ, ಈ ಘಟನೆ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಇವಿಎಂನ ವ್ಯವಸ್ಥೆ ಬಗ್ಗೆ ಪ್ರಶ್ನೆಯನ್ನು ಮೂಡಿಸಿದೆ. ಇವಿಎಂಗಳ ಬಳಕೆ ಬಗ್ಗೆ ಎಲ್ಲಾ ರಾಷ್ಟ್ರೀಯ ಪಕ್ಷಗಳೂ ಮರುಪರಿಶೀಲನೆ ನಡೆಸಬೇಕಾದ ಅಗತ್ಯವಿದೆ ಎಂದು ಟ್ವೀಟ್ ಮಾಡಿದ್ದಾರೆ. ಇಂತಹ ಹಲವು ಪ್ರಕರಣಗಳು ಯಾವಾಗಲೂ ನಡೆಯುತ್ತದೆ. ಇಂತಹ ಪ್ರಕರಣಗಳಲ್ಲಿ ವಾಹನ ಬಿಜೆಪಿ ಮುಖಂಡರಿಗೆ ಅಥವಾ ಅಭ್ಯರ್ಥಿಗಳಿಗೆ ಸೇರಿರುತ್ತದೆ. ಘಟನೆಯ ವೀಡಿಯೊ ಚಿತ್ರೀಕರಿಸಿದ ಬಳಿಕ, ಪ್ರಕರಣವನ್ನು ವಜಾಗೊಳಿಸಲಾಗುತ್ತದೆ. ಪ್ರಕರಣದ ವೀಡಿಯೊ ದಾಖಲಿಸಿದವರನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಬಿಜೆಪಿ ತನ್ನ ಮಾಧ್ಯಮ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತದೆ ಎಂದವರು ಆರೋಪಿಸಿದ್ದಾರೆ. ಎಐಡಿಯುಎಫ್‌ನ ಬದ್ರುದ್ದೀನ್ ಅಜ್ಮಲ್ ಅವರೂ ಘಟನೆಯನ್ನು ಖಂಡಿಸಿದ್ದಾರೆ. ಧ್ರುವೀಕರಣ- ವಿಫಲವಾಯಿತು. ಮತಗಳ ಖರೀದಿ ವಿಫಲವಾಯಿತು. ಅಭ್ಯರ್ಥಿಗಳ ಖರೀದಿ ವಿಫಲವಾಯಿತು. ಜುಮ್ಲೆಬಾಝಿ ವಿಫಲವಾಯಿತು. ಎರಡು ಸಿಎಂ ವಿಫಲವಾಯಿತು. ಸಿಎಎ ಬಗ್ಗೆ ಎರಡು ಬಗೆಯ ಹೇಳಿಕೆ ವಿಫಲವಾಯಿತು. ಸೋತ ಬಿಜೆಪಿಯ ಅಂತಿಮ ಪ್ರಯತ್ನ- ಇವಿಎಂ ಕದಿಯುವುದು. ಪ್ರಜಾಪ್ರಭುತ್ವದ ಕಗ್ಗೊಲೆ ಎಂದವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News