ಪುಣೆಯಲ್ಲಿ ಶನಿವಾರದಿಂದ 12 ಗಂಟೆಗಳ ನೈಟ್ ಕರ್ಫ್ಯೂ
ಪುಣೆ, ಎ. 2: ಕೊರೋನ ಪ್ರಕರಣಗಳ ಏರಿಕೆಯ ಆತಂಕ ಎದುರಿಸುತ್ತಿರುವ ಮಹಾರಾಷ್ಟ್ರದ ಪುಣೆಯ ಆಡಳಿತ ಶನಿವಾರದಿಂದ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ 1 ವಾರಗಳ ಕಾಲ ನಿಷೇಧಾಜ್ಞೆ ವಿಧಿಸಿದೆ. ಇಂದಿನ ವರೆಗೆ ರಾತ್ರಿ 8 ಗಂಟೆಯಿಂದ ಬೆಳಗ್ಗೆ 7 ಗಂಟೆ ವರೆಗೆ ನಿಷೇಧಾಜ್ಞೆ ವಿಧಿಸಲಾಗಿತ್ತು. ಈಗ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ ನಿಷೇಧಾಜ್ಞೆ ವಿಧಿಸಲಾಗಿದೆ. ಈ ಆದೇಶ ಶನಿವಾರದಿಂದ ಅನುಷ್ಠಾನಕ್ಕೆ ಬರಲಿದೆ. ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅಧ್ಯಕ್ಷತೆಯಲ್ಲಿ ನಡೆದ ಕೊರೋನ ಮರು ಪರಿಶೀಲನಾ ಸಭೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಾಗರಿಕರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ನಾವು ಸಂಘಟಿತರಾಗಿ ಈ ನಿರ್ಧಾರ ತೆಗೆದುಕೊಂಡೆವು. ಆದರೆ, ಇದು ಕೊರೋನ ಸೋಂಕಿನ ಹರಡುವಿಕೆಯನ್ನು ತಡೆಯಲು ನೆರವಾಗಲಿದೆ ಎಂದು ಪುಣೆಯ ವಿಭಾಗೀಯ ಆಯುಕ್ತ ಸೌರಭ್ ರಾವ್ ಶುಕ್ರವಾರ ಹೇಳಿದ್ದಾರೆ. ಧಾರ್ಮಿಕ ಸ್ಥಳ, ಹೊಟೇಲ್, ಬಾರ್, ಶಾಪಿಂಗ್ ಮಾಲ್ ಹಾಗೂ ಸಿನೆಮಾ ಮಂದಿರಗಳು ಮುಂದಿನ 7 ದಿನಗಳ ಮುಚ್ಚಲಿವೆ ಎಂದು ಅವರು ತಿಳಿಸಿದ್ದಾರೆ. ಹೊಸ ಅಲೆಯ ಸೋಂಕಿನ ಪರಿಣಾಮ ಪುಣೆ ದೇಶದಲ್ಲೇ ಅತಿ ಹೆಚ್ಚು ಕೊರೋನ ಸೋಂಕಿನ ಪ್ರಕರಣ ವರದಿಯಾಗುತ್ತಿರುವ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ ಗುರುವಾರ 8,011 ಹೊಸ ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿವೆ.