ಪ.ಬಂಗಾಳ: ಬಿಜೆಪಿ ಅಭ್ಯರ್ಥಿಗೆ ದೊಣ್ಣೆಯಿಂದ ಹಲ್ಲೆ ;ಇಬ್ಬರು ಆರೋಪಿಗಳ ಬಂಧನ

Update: 2021-04-02 13:24 GMT
ಸಾಂದರ್ಭಿಕ ಚಿತ್ರ

ಕೋಲ್ಕತಾ, ಎ.2: ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೀಪಕ್ ಹಾಲ್ದರ್ ಹಾಗೂ ಅವರ ಬೆಂಬಲಿಗರ ಮೇಲೆ ಜನರ ಗುಂಪೊಂದು ಶುಕ್ರವಾರ ಹಲ್ಲೆ ನಡೆಸಿದೆ ಎಂದು ಪೊಲೀಸರು ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್ ಪಕ್ಷ(ಟಿಎಂಸಿ)ದ ಶಾಸಕರಾಗಿದ್ದ ಹಾಲ್ದರ್, ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಅವರು ಸೌತ್ 24 ಪರಗಣ ಜಿಲ್ಲೆಯ ಹರಿದೇವ್‌ಪುರ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ ಈ ಘಟನೆ ಸಂಭವಿಸಿದೆ. ಪ್ರಚಾರ ಕಾರ್ಯಕ್ಕೆ ಜನರ ಗುಂಪೊಂದು ಅಡ್ಡಿಪಡಿಸಿದಾಗ ಎರಡೂ ಗುಂಪಿನ ನಡುವೆ ವಾಕ್ಸಮರ ನಡೆದಿದೆ. ವಾಗ್ಯುದ್ಧದ ಬಳಿಕ ಗುಂಪು ದೊಣ್ಣೆಯಿಂದ ಹಲ್ಲೆ ನಡೆಸಿದೆ. ಗಾಯಗೊಂಡ ಹಾಲ್ದರ್ ಹಾಗೂ ಅವರ ಬೆಂಬಲಿಗರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಾಲ್ದರ್ ಮೇಲೆ ನಡೆದ ಹಲ್ಲೆಯ ಹಿಂದೆ ಟಿಎಂಸಿ ಕಾರ್ಯಕರ್ತರಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ 117ರಲ್ಲಿ ರಸ್ತೆ ತಡೆ ನಡೆಸಲು ಮುಂದಾದಾಗ ಪೊಲೀಸರು ಅವರನ್ನು ಚದುರಿಸಿದರು. ಆರೋಪ ನಿರಾಕರಿಸಿರುವ ಟಿಎಂಸಿ, ಬಿಜೆಪಿಯ ಒಳಜಗಳ ಈ ಘಟನೆಗೆ ಕಾರಣ. ಚುನಾವಣೆ ಬಂದಾಗ ಪಕ್ಷಕ್ಕೆ ಸೇರ್ಪಡೆಗೊಂಡಿರುವ ದೀಪಕ್ ಹಾಲ್ದರ್‌ಗೆ ಸ್ಪರ್ಧಿಸಲು ಟಿಕೆಟ್ ನೀಡಿರುವುದು ಮೂಲ ಬಿಜೆಪಿಗರಲ್ಲಿ ಅಸಮಾಧಾನ ಹುಟ್ಟುಹಾಕಿದೆ. ಹಾಲ್ದರ್‌ಗೆ ಟಿಕೆಟ್ ನೀಡಿರುವುದಕ್ಕೆ ಹಲವು ಬಿಜೆಪಿಗರ ಆಕ್ಷೇಪವಿತ್ತು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News