ತಮಿಳುನಾಡು ವಿಧಾನ ಸಭೆ ಚುನಾವಣಾ ಕಣದಲ್ಲಿ ಜಲ್ಲಿಕಟ್ಟು ಕಾರ್ಡ್ ಪ್ರಯೋಗಿಸಿದ ಮೋದಿ

Update: 2021-04-02 16:25 GMT

ಮಧುರೈ, ಎ. 2: ಮುಂದಿನ ವಾರ ವಿಧಾನ ಸಭೆ ಚುನಾವಣೆ ನಡೆಯಲಿರುವ ತಮಿಳುನಾಡಿನಲ್ಲಿ ಎಡಿಎಂಕೆ-ಬಿಜೆಪಿ ಮೈತ್ರಿ ಪರ ಪ್ರಚಾರ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಮಧುರೈಯ ಮತದಾರರನ್ನು ಸೆಳೆಯಲು ‘ಜಲ್ಲಿ ಕಟ್ಟು’ ಕಾರ್ಡ್ ಅನ್ನು ಪ್ರಯೋಗಿಸಿದ್ದಾರೆ. ಇಂಗ್ಲಿಷ್‌ನಲ್ಲಿ ಮಾತನಾಡಿದ ಪ್ರಧಾನಿ ಅವರು ತಮಿಳು ಭಾಷೆಯನ್ನು ಪ್ರಶಂಸಿಸಿದರು. ತಮಿಳು ಜಗತ್ತಿನ ಅತಿ ಹಳೆಯ ಭಾಷೆ ಎಂದು ಹೇಳಿದರು. ಪ್ರಾದೇಶಿಕ ಸಾಹಿತ್ಯದೊಂದಿಗೆ ಇರುವ ಮಧುರೈಯ ನಂಟಿನ ಬಗ್ಗೆ ತಿಳಿಸಿದರು. ‘‘ಇಲ್ಲಿ ಡಿಎಂಕೆ ಸರಕಾರ ಹಾಗೂ ಕೇಂದ್ರದಲ್ಲಿ ಯುಪಿಎ ಸರಕಾರ ಇರುವಾಗ ಜಲ್ಲಿಕಟ್ಟನ್ನು ನಿಷೇಧಿಸಲಾಗಿತ್ತು. ಯುಪಿಎ ಸಚಿವರು ಇದನ್ನು ಅನಾಗರಿಕ ಪದ್ಧತಿ ಎಂದು ಹೇಳಿದ್ದರು. ಇದು ಸರಿಯೇ? ಇದು ತಮಿಳು ಸಂಸ್ಕೃತಿಯ ಅತಿ ಪ್ರಮುಖ ಅಂಗವಾದ, ಹಲವು ವರ್ಷ ಹಳೆಯ ಸಂಪ್ರದಾಯವೊಂದರ ಬಗ್ಗೆ ಮಾತನಾಡುವ ರೀತಿಯೇ?’’ ಎಂದು ಅವರು ಪ್ರಶ್ನಿಸಿದರು. 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕೇಂದ್ರದ ಎನ್‌ಡಿಎ ಸರಕಾರ ಹಾಗೂ ರಾಜ್ಯದ ಎಡಿಎಂಕೆ ಸರಕಾರ ಜಲ್ಲಿಕಟ್ಟನ್ನು ನಿಷೇಧಿಸುವುದಿಲ್ಲ ಎಂದು ಭರವಸೆ ನೀಡಿತು. ಯಾಕೆ? ಯಾಕೆಂದರೆ, ತಮಿಳು ಸಂಸ್ಕೃತಿ ನಮಗೆ ಅತಿ ಮುಖ್ಯ ಎಂದು ಅವರು ಹೇಳಿದರು. ಜಲ್ಲಿಕಟ್ಟು ಅಲ್ಲದೆ, ಯಾವುದೇ ವಾಸ್ತವ ವಿಷಯವನ್ನು ಮಾತನಾಡದೇ ಇರುವ ಬಗ್ಗೆ ನರೇಂದ್ರ ಮೋದಿ ಅವರು ಪ್ರತಿಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಡಿಎಂಕೆ ರಾಜ್ಯದಲ್ಲಿ ಮಾಫಿಯಾವನ್ನು ಹರಡುತ್ತಿದೆ ಎಂದು ಆರೋಪಿಸಿದರು. ‘‘ತಮಿಳುನಾಡಿನ ಸಹೋದರಿಯರೇ, ಸಹೋದರರೇ ಡಿಎಂಕೆ ಹಾಗೂ ಕಾಂಗ್ರೆಸ್‌ಗೆ ಮಾತನಾಡಲು ಯಾವುದೇ ವಾಸ್ತವ ವಿಷಯಗಳಿಲ್ಲ. ಅವರು ಸುಳ್ಳು ಹೇಳುವುದನ್ನು ನಿಯಂತ್ರಿಸಬೇಕು. ಅವರು ನಿಮಗೆ ಪ್ರತಿದಿನ ಸುಳ್ಳು ಹೇಳಿದ್ದಾರೆ’’ ಎಂದು ಮೋದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News