×
Ad

ಕಾಂಗ್ರೆಸ್ ಮಿತ್ರ ಪಕ್ಷಕ್ಕೆ ಬೆದರಿಕೆ: ಬಿಜೆಪಿಯ ಹಿಮಂತ ಶರ್ಮಾಗೆ ಪ್ರಚಾರ ನಡೆಸದಂತೆ ನಿಷೇಧ

Update: 2021-04-02 22:46 IST

ಹೊಸದಿಲ್ಲಿ /ಗುವಾಹಟಿ: ಮಂಗಳವಾರ ನಡೆಯಲಿರುವ ಮೂರನೇ ಮತ್ತು ಅಂತಿಮ ಹಂತದ ಅಸ್ಸಾಂ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯ ಸಚಿವ ಮತ್ತು ಬಿಜೆಪಿಯ  ಹಿರಿಯ ಮುಖಂಡ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಪ್ರಚಾರ ನಡೆಸದಂತೆ ಚುನಾವಣಾ ಆಯೋಗವು 48 ಗಂಟೆಗಳ ನಿಷೇಧ ಹೇರಿದೆ.

ಕಾಂಗ್ರೆಸ್ ನೀಡಿದ ದೂರಿನ ಮೇರೆಗೆ ಚುನಾವಣಾ ಆಯೋಗ ಶುಕ್ರವಾರ ತಡರಾತ್ರಿ ತನ್ನ ಆದೇಶ ಹೊರಡಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ) ಹೆಸರನ್ನು ದುರುಪಯೋಗಪಡಿಸಿಕೊಂಡು ಹಗ್ರಾಮ ಮೊಹಿಲರಿ ಅವರನ್ನು ಜೈಲಿಗೆ  ಕಳುಹಿಸುವುದಾಗಿ ಶರ್ಮಾ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ದೂರಿದೆ.  ಹಗ್ರಾಮ ಮೊಹಿಲರಿ  ನೇತೃತ್ವದ ಬಿಪಿಎಫ್ (ಬೋಡೊಲ್ಯಾಂಡ್ ಪೀಪಲ್ಸ್ ಫ್ರಂಟ್) ವಿರೋಧ ಪಕ್ಷದ ಮೈತ್ರಿಕೂಟದಲ್ಲಿದೆ.

ಶರ್ಮಾ ವಿರುದ್ಧದ  ನಿಷೇಧವು ಇಂದು ರಾತ್ರಿಯಿಂದ ಜಾರಿಗೆ ಬರುತ್ತದೆ.

ಗುರುವಾರ ಚುನಾವಣಾ ಆಯೋಗವು ಶರ್ಮಾ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದು, ಅದಕ್ಕೆ ಅವರು ಇಂದು ಉತ್ತರಿಸಿದ್ದಾರೆ.  ಅವರ ವಿವರಣೆ ತೃಪ್ತಿಕರವಾಗಿಲ್ಲ ಎಂದು ಪರಿಗಣಿಸಲಾಗಿದೆ.

ಮಾರ್ಚ್ 28 ರಂದು ತನ್ನ ಭಾಷಣದಲ್ಲಿ ಶರ್ಮಾ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.

"ಹಗ್ರಾಮ ಮೊಹಿಲರಿ ಉಗ್ರವಾದ ಚಟುವಟಿಕೆಯಲ್ಲಿ ತೊಡಗಿದರೆ... ಆತ ಜೈಲಿಗೆ ಹೋಗುತ್ತಾನೆ. ಇದು ನೇರವಾದ ಮಾತು ... ಈಗಾಗಲೇ ಸಾಕಷ್ಟು ಪುರಾವೆಗಳು ದೊರೆತಿವೆ. ಈ ಪ್ರಕರಣವನ್ನು ಎನ್ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಗೆ ನೀಡಲಾಗುತ್ತಿದೆ. ಕೊಕ್ರಜಹಾರ್ ನಲ್ಲಿ ಕಾರಿನೊಳಗೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ಪ್ರಕರಣವನ್ನು ಎನ್ಐಎಗೆ ನೀಡಲಾಗುತ್ತಿದೆ. ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶದಲ್ಲಿ ಹಗ್ರಾಮ ಸಹಿತ ಯಾರಿಗೂ ಅಶಾಂತಿ ಸೃಷ್ಟಿಸಲು ಅವಕಾಶ ನೀಡುವುದಿಲ್ಲ''ಎಂದು ಶರ್ಮಾ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News