×
Ad

ನೀವು ಪ್ರಧಾನಿಯಾಗಿದ್ದರೆ ಏನು ಮಾಡುತ್ತಿದ್ದಿರಿ? ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರಿಸಿದ್ದು ಹೀಗೆ...

Update: 2021-04-03 13:23 IST

ಹೊಸದಿಲ್ಲಿ: ತಾವು ಪ್ರಧಾನಿಯಾಗಿದ್ದಲ್ಲಿ ಕೇವಲ ಅಭಿವೃದ್ಧಿ ಕೇಂದ್ರಿತ ನೀತಿಗಳ ಬದಲು ಉದ್ಯೋಗ ಸೃಷ್ಟಿ ಕೇಂದ್ರಿತ ನೀತಿಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

"ನಮಗೆ ಪ್ರಗತಿ ಬೇಕು ಆದರೆ ಉತ್ಪಾದನೆ ಹೆಚ್ಚಿಸಲು ಉದ್ಯೋಗ ಸೃಷ್ಟಿಸಿ, ಜತೆಗೆ ಮೌಲ್ಯ ವರ್ಧನೆಗೆ ಸಕಲ ಯತ್ನಗಳನ್ನೂ ಮಾಡಬೇಕು ಎಂದು ನಾನು ಹೇಳುತ್ತೇನೆ" ಎಂದು ಆನ್‍ ಲೈನ್ ಚರ್ಚೆಯೊಂದರ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ರಾಹುಲ್ ಹೇಳಿದರು.

ನೀವು ಪ್ರಧಾನಿಯಾಗಿದ್ದರೆ ಯಾವ ನೀತಿಗಳಿಗೆ ಆದ್ಯತೆ ನೀಡುತ್ತೀರಿ ಎಂಬ ಪ್ರಶ್ನೆಗೆ ಗಾಂಧಿ ಪ್ರತಿಕ್ರಿಯಿಸುತ್ತಿದ್ದರು. ಹಾರ್ವರ್ಡ್ ಕೆನಡಿ ಸ್ಕೂಲ್ ಪ್ರೊಫೆಸರ್ ಹಾಗೂ ಅಮೆರಿಕಾದ ಮಾಜಿ ಸೆಕ್ರಟರಿ ಆಫ್ ಸ್ಟೇಟ್ ನಿಕೋಲಾಸ್ ಬನ್ರ್ಸ್ ಕೂಡ ಈ ಚರ್ಚೆಯಲ್ಲಿ ಭಾಗವಹಿಸಿದ್ದರು.

"ಈಗ ನಾವು ನಮ್ಮ  ಪ್ರಗತಿ ಕುರಿತು ಯೋಚಿಸಿದಾಗ, ಪ್ರಗತಿ ಮತ್ತು ಉದ್ಯೋಗ ಸೃಷ್ಟಿ ನಡುವೆ ಇರಬೇಕಿರುವ ಸಂಬಂಧ ಕಾಣುತ್ತಿಲ್ಲ.  ಮೌಲ್ಯವರ್ಧನೆಯಲ್ಲಿ ಚೀನೀಯರು ಯಾವತ್ತೂ ಮುಂದು. ನನಗೆ ಉದ್ಯೋಗ ಸೃಷ್ಟಿ ಸಮಸ್ಯೆಯಿದೆ ಎಂದು ಹೇಳುವ ಯಾವುದೇ ಚೀನೀ ನಾಯಕನನ್ನು ನಾನು ಇಲ್ಲಿಯ ತನಕ ಭೇಟಿಯಾಗಿಲ್ಲ" ಎಂದು ರಾಹುಲ್ ಹೇಳಿದರು.

"ಉದ್ಯೋಗ ಸೃಷ್ಟಿ ಸಂಖ್ಯೆಯೂ ಅದಕ್ಕೆ ತಕ್ಕಂತೆ ಇರದೇ ಇದ್ದರೆ ನನಗೆ ಶೇ9ರಷ್ಟು ಪ್ರಗತಿ ದರದಲ್ಲಿ ಆಸಕ್ತಿಯಿಲ್ಲ" ಎಂದು ರಾಹುಲ್ ಹೇಳಿದರು.

"ಅಸ್ಸಾಂನಲ್ಲಿ ನಮ್ಮ ಚುನಾವಣಾ ಪ್ರಚಾರ ನೋಡಿಕೊಳ್ಳುವವರು  ನನಗೆ ಕಳುಹಿಸುತ್ತಿರುವ ವೀಡಿಯೋದಲ್ಲಿ ಬಿಜೆಪಿ ಅಭ್ಯರ್ಥಿಗಳು ತಮ್ಮ ಕಾರುಗಳಲ್ಲಿ ಮತಯಂತ್ರಗಳನ್ನು ಸಾಗಿಸುತ್ತಿರುವುದು ಕಾಣಿಸುತ್ತದೆ. ಇಲ್ಲಿ ಸಮಸ್ಯೆಯಿದೆ ಎಂದು ಅವರು ಹೇಳುತ್ತಿದ್ದಾರೆ, ಆದರೆ ರಾಷ್ಟ್ರೀಯ ಮಾಧ್ಯಮದಲ್ಲಿ ಏನೂ ನಡೆಯುತ್ತಿಲ್ಲ" ಎಂದು ರಾಹುಲ್ ಹೇಳಿದರು.

"ಕಾಂಗ್ರೆಸ್ ಮಾತ್ರವಲ್ಲ, ಬಿಎಸ್‍ಪಿ, ಎಸ್‍ಪಿ ಹಾಗೂ ಎನ್‍ಸಿಪಿ ಚುನಾವಣೆ ಗೆಲ್ಲುತ್ತಿಲ್ಲ, ಚುನಾವಣೆಯಲ್ಲಿ ಹೋರಾಡಲು ನಮ್ಮನ್ನು ರಕ್ಷಿಸುವ ನ್ಯಾಯಾಂಗ ವ್ಯವಸ್ಥೆ ಬೇಕು, ಸಾಕಷ್ಟು ಸ್ವಾತಂತ್ರ್ಯವಿರುವ ಮಾಧ್ಯಮಗಳು ಬೇಕು, ಆರ್ಥಿಕ ಸಮಾನತೆ ಬೇಕು. ಆದರೆ ಅವುಗಳಿಲ್ಲ" ಎಂದು ರಾಹುಲ್ ಖೇದ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News