ಪಂಜಾಬ್‌ ನ ರೈತರು ʼಡ್ರಗ್ಸ್‌ʼ ನೀಡಿ ಆಳುಗಳನ್ನು ದೀರ್ಘಾವಧಿ ದುಡಿಸುತ್ತಿದ್ದಾರೆ: ಸರಕಾರಕ್ಕೆ ಗೃಹ ಸಚಿವಾಲಯ ಪತ್ರ

Update: 2021-04-03 15:39 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಎ.3: ರಾಜ್ಯದ ಗಡಿ ಜಿಲ್ಲೆಗಳಲ್ಲಿಯ ರೈತರು ವಲಸೆ ಕಾರ್ಮಿಕರು ಮತ್ತು ಜೀತದಾಳುಗಳಿಂದ ಹೆಚ್ಚಿನ ದುಡಿಮೆಯನ್ನು ಪಡೆಯಲು ಅವರಿಗೆ ಮಾದಕ ದ್ರವ್ಯಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ ಕೇಂದ್ರ ಗೃಹ ಸಚಿವಾಲಯವು ಪಂಜಾಬ್ ಸರಕಾರಕ್ಕೆ ಪತ್ರವೊಂದನ್ನು ರವಾನಿಸಿದೆ. ಈ ವಿಷಯಲ್ಲಿ ತನಿಖೆಯನ್ನು ನಡೆಸುವಂತೆ ಮತ್ತು ಕ್ರಮಾನುಷ್ಠಾನ ಕುರಿತು ಆದ್ಯತೆಯಲ್ಲಿ ತನಗೆ ವರದಿಯನ್ನು ಸಲ್ಲಿಸುವಂತೆ ಅದು ಪಂಜಾಬ್ ಸರಕಾರಕ್ಕೆ ಸೂಚಿಸಿದೆ.

  2019-20ರಲ್ಲಿ ಪಂಜಾಬಿನ ಗಡಿಜಿಲ್ಲೆಗಳಾದ ಗುರುದಾಸಪುರ,ಅಮೃತಸರ,ಫಿರೋಝ್‌ಪುರ ಮತ್ತು ಅಬೋಹಾರ್ ಜಿಲ್ಲೆಗಳಲ್ಲಿ ಇಂತಹ 58 ಕಾರ್ಮಿಕರನ್ನು ಬಿಎಸ್‌ಎಫ್ ಬಂಧಿಸಿತ್ತು. ವಿಚಾರಣೆ ಸಂದರ್ಭದಲ್ಲಿ ಹೆಚ್ಚಿನ ಕಾರ್ಮಿಕರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮತ್ತು ಗಡಿಜಿಲ್ಲೆಗಳಲ್ಲಿಯ ರೈತರ ಬಳಿ ಜೀತದಾಳುಗಳಾಗಿ ದುಡಿಯುತ್ತಿದ್ದ ವಿಷಯ ಬೆಳಕಿಗೆ ಬಂದಿತ್ತು. ಬಂಧಿತರು ಬಡಕುಟುಂಬಗಳ ಹಿನ್ನೆಲೆಯವರಾಗಿದ್ದು,ಬಿಹಾರ ಮತ್ತು ಉತ್ತರ ಪ್ರದೇಶಗಳ ಕುಗ್ರಾಮಗಳಿಗೆ ಸೇರಿದವರಾಗಿದ್ದರು. ಮಾನವ ಕಳ್ಳಸಾಗಣೆ ಜಾಲಗಳು ಉತ್ತಮ ವೇತನದ ಆಮಿಷವೊಡ್ಡಿ ಈ ಕಾರ್ಮಿಕರನ್ನು ಪಂಜಾಬಿಗೆ ಕರೆತರುತ್ತವೆ. ಆದರೆ ಪಂಜಾಬ ತಲುಪಿದ ಬಳಿಕ ಅವರನ್ನು ಶೋಷಿಸಲಾಗುತ್ತದೆ, ಕಡಿಮೆ ವೇತನ ನೀಡಲಾಗುತ್ತದೆ ಮತ್ತು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತದೆ. ಈ ಕಾರ್ಮಿಕರು ಹೊಲಗದ್ದೆಗಳಲ್ಲಿ ತುಂಬ ಸಮಯ ಕೆಲಸ ಮಾಡುವಂತಾಗಲು ಅವರಿಗೆ ಮಾದಕದ್ರವ್ಯಗಳನ್ನು ನೀಡಲಾಗುತ್ತದೆ ಮತ್ತು ಇದು ಅವರ ದೈಹಿಕ ಮತ್ತು ಮಾನಸಿಕ ಸ್ವಾಸ್ಥದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ. ಬಿಎಸ್‌ಎಫ್ ಮುಂದಿನ ಕ್ರಮಕ್ಕಾಗಿ ಬಂಧಿತ ವ್ಯಕ್ತಿಗಳನ್ನು ರಾಜ್ಯ ಪೊಲೀಸರಿಗೆ ಹಸ್ತಾಂತರಿಸುತ್ತದೆ ಎಂದು ಗೃಹಸಚಿವಾಲಯವು ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ಮಾ.17ರಂದು ಬರೆದಿರುವ ತನ್ನ ಪತ್ರದಲ್ಲಿ ಹೇಳಿದೆ.

 ಮಾನವ ಕಳ್ಳ ಸಾಗಣೆ,ಜೀತ ಪದ್ಧತಿ ಮತ್ತು ಮಾನವ ಹಕ್ಕು ಉಲ್ಲಂಘನೆ ಒಳಗೊಂಡಿರುವುದರಿಂದ ಇದೊಂದು ಬಹು ಆಯಾಮಗಳ ಅಗಾಧ ಸಮಸ್ಯೆಯಾಗಿದೆ ಎಂದೂ ಸಚಿವಾಲಯವು ತಿಳಿಸಿದೆ.

ಆದರೆ ಗೃಹ ಸಚಿವಾಲಯದ ಪತ್ರವು ತಮಗೆ ಕಳಂಕ ಹಚ್ಚಲು ಮೋದಿ ಸರಕಾರದ ಮತ್ತೊಂದು ಪ್ರಯತ್ನವಾಗಿದೆ ಎಂದು ಪ್ರತಿಭಟನಾನಿರತ ರೈತರು ಪರಿಗಣಿಸುತ್ತಿದ್ದಾರೆ.

  ‘ನಮ್ಮನ್ನು ಖಲಿಸ್ತಾನಿಗಳು ಮತ್ತು ಭಯೋತ್ಪಾದಕರೆಂದು ಕರೆದ ಬಳಿಕ ಇದೀಗ ಕೇಂದ್ರ ಸರಕಾರವು ಮತ್ತೊಂದು ಕೋಮು ದಾಳವನ್ನು ಉರುಳಿಸಿದೆ. ಗೃಹ ಸಚಿವಾಲಯವು ಹೇಳಿರುವಂತೆ ಬಿಎಸ್‌ಎಫ್ ಈ ಸಮೀಕ್ಷೆಯನ್ನು 2019-20ರಲ್ಲಿ ನಡೆಸಿತ್ತು ಮತ್ತು ಈವರೆಗೆ ಈ ವರದಿಯನ್ನು ಬುಡಕ್ಕೆ ಹಾಕಿಕೊಂಡು ಕುಳಿತಿದ್ದ ಅವರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರ ಪ್ರತಿಭಟನೆ ಉತ್ತುಂಗದಲ್ಲಿರುವಾಗ ಮಾತ್ರ ರಾಜ್ಯ ಸರಕಾರಕ್ಕೆ ಪತ್ರವನ್ನು ಬರೆದಿರುವುದು ಅಚ್ಚರಿ ಮೂಡಿಸಿದೆ ಎಂದು ಬಿಕೆಯು ದಕೌಂಡಾದ ಪ್ರಧಾನ ಕಾರ್ಯದರ್ಶಿ ಜಗಮೋಹನ್ ಸಿಂಗ್ ಹೇಳಿದರು.

ಪತ್ರವನ್ನು ಹಿಂದೆಗೆದುಕೊಳ್ಳುವಂತೆ ಗೃಹ ಸಚಿವಾಲಯವನ್ನು ಆಗ್ರಹಿಸಿದ ಸಿಂಗ್,‘ನಮ್ಮ ಕಾರ್ಮಿಕರೊಂದಿಗೆ ನಾವು ಉತ್ತಮ ಬಾಂಧವ್ಯವನ್ನು ಹೊಂದಿದ್ದೇವೆ. ರಾಜ್ಯಾದ್ಯಂತ ದುಡಿಯಲು ಪ್ರತಿ ವರ್ಷ ಉತ್ತರ ಪ್ರದೇಶ ಮತ್ತು ಬಿಹಾರಗಳಿಂದ ಆಗಮಿಸುವ ನಮ್ಮ ಹಿಂದು ವಲಸೆ ಕಾರ್ಮಿಕರು ಮತ್ತು ನಮ್ಮ ನಡುವೆ ಬಿರುಕನ್ನು ಮೂಡಿಸಲು ಕೇಂದ್ರವು ಬಯಸುತ್ತಿದೆ. ಪಂಜಾಬಿನ ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ನಾವು ಭೇಟಿಯಾಗಿ ಈ ಪತ್ರದ ಕುರಿತು ನಮ್ಮ ಆಕ್ರೋಶವನ್ನು ಅವರಿಗೆ ತಿಳಿಸುತ್ತೇವೆ. ಪುರಾವೆಯಾಗಿ ಈ ಜಿಲ್ಲೆಗಳಲ್ಲಿ ದುಡಿಯುತ್ತಿರುವ ವಲಸೆ ಕೃಷಿ ಕಾರ್ಮಿಕರನ್ನು ನಾವು ಅವರೆದುರು ಹಾಜರುಪಡಿಸುತ್ತೇವೆ ’ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News