×
Ad

ಮಾವೋವಾದಿಗಳೊಂದಿಗೆ ಎನ್‌ ಕೌಂಟರ್: 17 ಭದ್ರತಾ ಸಿಬ್ಬಂದಿಗಳ ಮೃತದೇಹ ಪತ್ತೆ

Update: 2021-04-04 13:51 IST
photo: twitter

ಹೊಸದಿಲ್ಲಿ, ಎ. 2: ಚತ್ತೀಸ್‌ಗಢದ ಬಿಜಾಪುರ ಹಾಗೂ ಸುಕ್ಮಾ ಜಿಲ್ಲೆಯ ನಡುವಿನ ಗಡಿಯಲ್ಲಿ ಇರುವ ಅರಣ್ಯದಲ್ಲಿ ಮಾವೋವಾದಿಗಳ ವಿರುದ್ಧ ಶನಿವಾರ ನಡೆದ ಎನ್‌ಕೌಂಟರ್ ಸಂದರ್ಭ ಮಾವೋವಾದಿಗಳು ನಡೆಸಿದ ಭೀಕರ ದಾಳಿಗೆ ಭದ್ರತಾ ಪಡೆಯ 22ಕ್ಕೂ ಅಧಿಕ ಯೋಧರು ಸಾವನ್ನಪ್ಪಿದ್ದಾರೆ. ಇತರ 31 ಮಂದಿ ಯೋಧರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಎಪ್ರಿಲ್ 4ರಂದು ಬೆಳಗ್ಗೆ 17 ಯೋಧರ ಮೃತದೇಹಗಳು ಪತ್ತೆಯಾಗಿರುವುದನ್ನು ಬಿಜಾಪುರ ಪೊಲೀಸ್ ಅಧೀಕ್ಷಕ ದೃಢಪಡಿಸಿದ್ದಾರೆ. ಇದಕ್ಕಿಂತ ಒಂದು ದಿನ ಮುನ್ನ ಐವರು ಯೋಧರ ಮೃತದೇಹಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.

ಶನಿವಾರ ಐವರು ಯೋಧರು ಸಾವನ್ನಪ್ಪಿದ್ದ ಹಾಗೂ ಇತರ 30 ಮಂದಿ ಗಾಯಗೊಂಡ ಬಳಿಕ 18 ಸಿಬ್ಬಂದಿ ನಾಪತ್ತೆಯಾಗಿದ್ದರು. ರವಿವಾರ ಶೋಧ ಕಾರ್ಯಾಚರಣೆ ಸಂದರ್ಭ 17 ಯೋಧರ ಮೃತದೇಹ ಪತ್ತೆಯಾಗಿದೆ. ಇದರೊಂದಿಗೆ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಯೋಧರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮಾವೋವಾದಿಯೆಂದು ಹೇಳಲಾದ ಮಹಿಳೆಯೋರ್ವರ ಮೃತದೇಹ ಕೂಡ ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಪತ್ತೆಯಾಗಿದೆ. ಭದ್ರತಾ ಪಡೆಯ ಕೆಲವು ಶಸ್ತ್ರಾಸ್ತ್ರಗಳು ನಾಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ. ‘‘2,000 ಸಂಖ್ಯೆಯ ಯೋಧರಿದ್ದ ಭದ್ರತಾ ಪಡೆಗಳ ಪ್ರತ್ಯೇಕ ಜಂಟಿ ತಂಡ ಮಾವೋವಾದಿಗಳ ಭದ್ರಕೋಟೆಯಾಗಿರುವ ದಕ್ಷಿಣ ಬಸ್ತಾರ್ ಅರಣ್ಯದ ಬಿಜಾಪುರ ಹಾಗೂ ಸುಕ್ಮಾ ಜಿಲ್ಲೆಗಳಲ್ಲಿ ಶುಕ್ರವಾರ ಮಾವೋ ನಿಗ್ರಹ ಕಾರ್ಯಾಚರಣೆ ಆರಂಭಿಸಿತ್ತು’’ ಎಂದು ರಾಜ್ಯ ಡಿಐಜಿ (ಮಾವೋವಾದಿ ನಿಗ್ರಹ ಕಾರ್ಯಾಚರಣೆ) ಒ.ಪಿ. ಪಾಲ್ ಹೇಳಿದ್ದಾರೆ.

ತರ್ರೇಂ, ಉಸೂರ್, ಪಾಮೆಡ್ (ಬಿಜಾಪುರ), ಮಿನ್ಪಾ, ನರಸಪುರಂ (ಸುಕ್ಮಾ)-ಈ ಐದು ಸ್ಥಳಗಳಲ್ಲಿ ಆರಂಭಿಸಲಾದ ಕಾರ್ಯಾಚರಣೆಯಲ್ಲಿ ಸಿಆರ್‌ಪಿಎಫ್, ಅದರ ಘಟಕ ಕೋಬ್ರಾ, ಡಿಆರ್‌ಜಿ ಹಾಗೂ ಎಸ್‌ಟಿಎಫ್ ಪಾಲ್ಗೊಂಡಿತು ಎಂದು ಅವರು ತಿಳಿಸಿದ್ದಾರೆ. ತರೇಮ್‌ನಿಂದ ರವಾನಿಸಲಾದ ಗಸ್ತು ತಂಡ ಹಾಗೂ ಜಾಗರ್‌ಗುಂಡಾ ಪೊಲೀಸ್ ಠಾಣಾ ವ್ಯಾಪ್ತಿಯ ಜೋನಗುಡಾದ ಸಮೀಪ ಬಿಎಲ್‌ಜಿಎ (ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ) ಯ ಮಾವೋವಾದಿಗಳ ವಿರುದ್ಧ ಶನಿವಾರ ಮಧ್ಯಾಹ್ನ ಮೂರು ಗಂಟೆಗಳ ಕಾಲ ಎನ್‌ಕೌಂಟರ್ ನಡೆಸಿತು. ಈ ಸಂದರ್ಭ ಮಾವೋವಾದಿಗಳು ಭೀಕರ ದಾಳಿ ನಡೆಸಿದರು ಎಂದು ಪಾಲ್ ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿಯ ಸಾವಿನ ಬಗ್ಗೆ ಶನಿವಾರ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಯೋಧರ ಬಲಿದಾನವನ್ನು ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ.

ಚತ್ತೀಸ್‌ಗಢ ಎನ್‌ಕೌಂಟರ್‌ನಲ್ಲಿ ವೀರ ಯೋಧರ ಬಲಿದಾನವನ್ನು ವ್ಯರ್ಥ್ಯವಾಗಲು ಬಿಡುವುದಿಲ್ಲ. ಸೂಕ್ತ ಸಮಯದಲ್ಲಿ ತಕ್ಕ ಪ್ರತ್ಯುತ್ತರ ನೀಡಲಾಗುವುದು.

ಅಮಿತ್ ಶಾ, ಕೇಂದ್ರ ಗೃಹ ಸಚಿವ

ಮಾವೋವಾದಿಗಳಿಂದ ಲಘು ಮೆಷಿನ್ ಗನ್, ದೇಶಿ ರಾಕೆಟ್ ಬಳಕೆ: ಅಧಿಕಾರಿಗಳು

ಬಿಜಾಪುರದಲ್ಲಿ ನಡೆದ ಎನ್‌ಕೌಂಟರ್ ಸಂದರ್ಭ ಮಾವೋವಾದಿಗಳು ಭದ್ರತಾ ಪಡೆ ಮೇಲೆ ಲಘು ಮೆಷಿನ್ ಗನ್ (ಎಲ್‌ಎಂಜಿ), ಅಂಡರ್ ಬ್ಯಾರಲ್ ಗ್ರೆನೇಡ್ ಲಾಂಚರ್ (ಯುಬಿಜಿಎಲ್) ಹಾಗೂ ದೇಶಿ ರಾಕೆಟ್ ಬಳಸಿ ಮಾರಕ ದಾಳಿ ನಡೆಸಿದ್ದಾರೆ ಎಂದು ಸಿಆರ್‌ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ. “ಮಾವೋವಾದಿಗಳು ಅಡಗಿ ಕುಳಿತು ಲಘು ಮೆಷಿನ್ ಗನ್‌ನಿಂದ ದಾಳಿ ನಡೆಸಿದ್ದಾರೆ ಎಂದು ಪಡೆಯ ಕಮಾಂಡರ್ ನನಗೆ ತಿಳಿಸಿದ್ದಾರೆ. ಯುಬಿಜಿಎಲ್, ದೇಸಿ ರಾಕೆಟ್ ಮೊದಲಾದವುಗಳನ್ನು ಮಾವೋವಾದಿಗಳು ಈ ಹಿಂದೆ ಕೂಡ ಬಳಸಿದ್ದರು. ಆದರೆ, ಈ ಬಾರಿ ಅದರ ತೀವ್ರತೆ ಹೆಚ್ಚಾಗಿತ್ತು. ಮೃತಪಟ್ಟ ಹಾಗೂ ಗಾಯಗೊಂಡವರನ್ನು ಮಾವೋವಾದಿಗಳು ಟ್ರಾಕ್ಟರ್‌ನಲ್ಲಿ ಕೊಂಡೊಯ್ದರು. ಅವರಿಗೆ ಆದ ಸಾವು-ನೋವನ್ನು ಈ ಮೂಲಕ ಗ್ರಹಿಸಬಹುದು” ಎಂದು ಸಿಆರ್‌ಪಿಎಫ್‌ನ ಪ್ರಧಾನ ನಿರ್ದೇಶಕ (ಡಿಜಿ) ಕುಲದೀಪ್ ಸಿಂಗ್ ಹೇಳಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂತಾಪ

ನಕ್ಸಲರು ನಡೆಸಿದ ಭೀಕರ ದಾಳಿಯಲ್ಲಿ ಯೋಧರು ಮೃತಪಟ್ಟ ಘಟನೆಗೆ ಸಂಬಂಧಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ‘‘ಚತ್ತೀಸ್‌ಗಢದಲ್ಲಿ ಮಾವೋವಾದಿಗಳ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಭದ್ರತಾ ಪಡೆಯ ಯೋಧರು ಹುತಾತ್ಮರಾಗಿದ್ದಾರೆ. ಇದು ಅತ್ಯಂತ ದುಃಖಕರ ವಿಚಾರವಾಗಿದೆ. ಯೋಧರ ಕುಟುಂಬಸ್ತರಿಗೆ ಸಂತಾಪ ಸೂಚಿಸುತ್ತೇನೆ. ಇಡೀ ದೇಶ ಅವರ ನೋವನ್ನು ಹಂಚಿಕೊಳ್ಳಲಿದೆ. ಯೋಧರ ತ್ಯಾಗವನ್ನು ದೇಶ ಎಂದಿಗೂ ಮರೆಯುವುದಿಲ್ಲ’’ ಎಂದು ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News