ಕೇರಳ ವಿಧಾನ ಸಭೆ ಚುನಾವಣೆ: ಬಡ ವ್ಯಕ್ತಿಗೆ ಪ್ರತಿ ತಿಂಗಳು 6 ಸಾವಿರ ರೂ.; ರಾಹುಲ್ ಗಾಂಧಿ ಭರವಸೆ

Update: 2021-04-04 17:11 GMT

ವಯನಾಡ್(ಕೇರಳ), ಎ.5: ವಿಧಾನಸಭೆ ಚುನಾವಣೆ ದಿನಾಂಕ ಎಪ್ರಿಲ್ 6 ಹತ್ತಿರ ಬರುತ್ತಿರುವಂತೆಯೇ ಮತದಾರರನ್ನು ಸೆಳೆಯಲು ತನ್ನ ‘ನ್ಯೂಂತಮ್ ಆಯ್ ಯೋಜನೆ’ (ಎನ್ವೈಎ-ನ್ಯಾಯ್)ಗೆ ಉತ್ತೇಜನ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಯುಡಿಎಫ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿರುವ ಪ್ರತಿ ಬಡ ವ್ಯಕ್ತಿಗಳು ಪ್ರತಿ ತಿಂಗಳು 6,000 ರೂ. ಪಡೆಯಲಿದ್ದಾರೆ ಎಂದು ಭರವಸೆ ನೀಡಿದ್ದಾರೆ.

‘‘ಯುಡಿಎಫ್ ಕ್ರಾಂತಿಕಾರಿ ಯೋಜನೆಯನ್ನು ಪ್ರಸ್ತಾವಿಸುತ್ತಿದೆ. ಇತರ ಯಾವುದೇ ರಾಜ್ಯಗಳಲ್ಲಿ ಇಂತಹ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಿಲ್ಲ’’ ಎಂದು ಮಾನಂತವಾಡಿಯ ವೆಲ್ಲಮುಂಡದಲ್ಲಿ ಆಯೋಜಿಸಲಾಗಿದ್ದ ಯುಡಿಎಫ್ ಸಭೆಯಲ್ಲಿ ರಾಹುಲ್ ಗಾಂಧಿ ಹೇಳಿದರು.

ತಿರುನೆಲ್ಲಿಯ ಪ್ರಾಚೀನ ಮಹಾವಿಷ್ಣು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ರಾಹುಲ್ ಗಾಂಧಿ ಸಭೆ ನಡೆಯುವ ಸ್ಥಳಕ್ಕೆ ಆಗಮಿಸಿದರು. ‘‘ಕೇರಳದಲ್ಲಿರುವ ಬಡವರ ಕೈಗೆ ನೇರವಾಗಿ ಹಣ ನೀಡುವ ಚಿಂತನೆ ನಮ್ಮಲ್ಲಿದೆ. ಅಲ್ಲದೆ, ಇದು ಸಣ್ಣ ಮೊತ್ತ ಅಲ್ಲ. ಕೇರಳದ ಪ್ರತಿ ಬಡ ವ್ಯಕ್ತಿ ತಿಂಗಳಿಗೆ 6 ಸಾವಿರ ರೂ. ಹಾಗೂ ವರ್ಷಕ್ಕೆ 72 ಸಾವಿರ ರೂ. ಪಡೆಯಲಿದ್ದಾರೆ. ಇದು ತಪ್ಪದೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ’’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News