ರಫೇಲ್ ಒಪ್ಪಂದ: ಭಾರತೀಯ ಮಧ್ಯವರ್ತಿಗೆ 1 ಮಿಲಿಯನ್ ಯುರೋ 'ಉಡುಗೊರೆ' ನೀಡಿದ್ದ ಡಸ್ಸಾಲ್ಟ್

Update: 2021-04-05 18:32 GMT

ಹೊಸದಿಲ್ಲಿ,ಎ.5: ಭಾರತಕ್ಕೆ 36 ರಫೇಲ್ ಯುದ್ಧವಿಮಾನಗಳ ಪೂರೈಕೆಗಾಗಿ 2016ರಲ್ಲಿ ಒಪ್ಪಂದವನ್ನು ಮಾಡಿಕೊಂಡಿದ್ದ ಫ್ರಾನ್ಸ್‌ನ ಪ್ರಮುಖ ವೈಮಾನಿಕ ಕಂಪನಿ ಡಸಾಲ್ಟ್ ಅದಕ್ಕಾಗಿ ಭಾರತೀಯ ಮಧ್ಯವರ್ತಿಗೆ 1.1 ಮಿಲಿಯನ್ ಯುರೋ(ಸುಮಾರು 9.50 ಕೋ.ರೂ.)ಗಳನ್ನು ಪಾವತಿಸಿತ್ತು ಎಂದು ಆ ದೇಶದ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಏಜೆನ್ಸ್ ಫ್ರಾಂಕೈಸ್ ಆ್ಯಂಟಿಕರಪ್ಶನ್ (ಎಎಫ್‌ಎ)ನ ತನಿಖೆಯನ್ನು ಆಧರಿಸಿ ಫ್ರೆಂಚ್ ಆನ್‌ಲೈನ್ ಮಾಧ್ಯಮ ‘ಮೀಡಿಯಾಪಾರ್ಟ್ ’ಆರೋಪಿಸಿದೆ.

ಮಧ್ಯವರ್ತಿ,ಡೆಫ್ಸಿಸ್ ಸೊಲ್ಯೂಶನ್ಸ್ ಎಂಬ ಸಂಸ್ಥೆಯನ್ನು ನಡೆಸುತ್ತಿರುವ ಸುಶೇನ್ ಗುಪ್ತಾ ಇನ್ನೊಂದು ರಕ್ಷಣಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಅಕ್ರಮ ಹಣ ವಹಿವಾಟು ಆರೋಪವನ್ನು ಎದುರಿಸುತ್ತಿದ್ದಾರೆ ಎಂದು ಮೀಡಿಯಾಪಾರ್ಟ್ ತನ್ನ ವರದಿಯಲ್ಲಿ ಹೇಳಿದೆ.

 ರಫೇಲ್ ಯುದ್ಧವಿಮಾನಗಳ 50 ಬೃಹತ್ ಪ್ರತಿಕೃತಿ ಮಾದರಿಗಳ ತಯಾರಿಕೆಗಾಗಿ ಈ ಮೊತ್ತವನ್ನು ಪಾವತಿಸಲಾಗಿದೆ ಎಂದು ಡಸಾಲ್ಟ್ ತಿಳಿಸಿದೆ,ಆದರೆ ಈ ಮಾದರಿಗಳು ತಯಾರಾಗಿದ್ದವು ಎನ್ನುವುದಕ್ಕೆ ಯಾವುದೇ ಪುರಾವೆಯನ್ನು ಅದು ಎಎಫ್‌ಎ ಪರೀಕ್ಷಕರಿಗೆ ನೀಡಿಲ್ಲ ಎಂದು ವರದಿಯು ತಿಳಿಸಿದೆ.

ಎಎಫ್‌ಎ ಡಸಾಲ್ಟ್‌ನ 2017ನೇ ಸಾಲಿನ ಲೆಕ್ಕ ಪರಿಶೋಧನೆ ನಡೆಸಿದ ಸಂದರ್ಭದಲ್ಲಿ ಈ ವಿಷಯವು ಬೆಳಕಿಗೆ ಬಂದಿತ್ತು,ಆದರೆ ‘ಎಲ್ಲ ಸ್ಪಷ್ಟ ತರ್ಕಗಳಿಗೆ ವಿರುದ್ಧವಾಗಿ ’ಎಎಫ್‌ಎ ಪ್ರಕರಣವನ್ನು ಪ್ರಾಸಿಕ್ಯೂಟರ್‌ಗಳಿಗೆ ವಹಿಸದಿರಲು ನಿರ್ಧರಿಸಿತ್ತು ಎಂದು ಮೀಡಿಯಾಪಾರ್ಟ್ ಹೇಳಿದೆ.

‘ಗ್ರಾಹಕರಿಗೆ ಉಡುಗೊರೆಗಳು ’ಶೀರ್ಷಿಕೆಯಡಿ ಇಷ್ಟೊಂದು ದೊಡ್ಡ ಮೊತ್ತವನ್ನು ನಮೂದಿಸಿದ್ದು ಪರೀಕ್ಷಕರ ಹುಬ್ಬೇರುವಂತೆ ಮಾಡಿತ್ತು. ಉಡುಗೊರೆಗಾಗಿ ಇದು ನಿಜಕ್ಕೂ ಬೃಹತ್ ಮೊತ್ತವಾಗಿತ್ತು. ಫ್ರೆಂಚ್ ಕಾನೂನುಗಳು ಉಡುಗೊರೆಗಳಿಗೆ ನಿಖರವಾದ ಮಿತಿಯನ್ನು ನಿಗದಿಗೊಳಿಸಿಲ್ಲವಾದರೂ ನೂರಾರು ಯುರೋ ಮೌಲ್ಯದ ವಾಚ್ ಅಥವಾ ಪಾರ್ಟಿಯನ್ನು ನೀಡುವುದು ಭ್ರಷ್ಟಾಚಾರಕ್ಕೆ ಆರೋಪ ಹೊರಿಸಲು ಸಾಕು ಎಂದು ತನ್ನ ವರದಿಯಲ್ಲಿ ಹೇಳಿರುವ ಎಎಫ್‌ಎ,ತನ್ನ ಈ ಉಡುಗೊರೆಯನ್ನು ಸಮರ್ಥಿಸಿಕೊಳ್ಳಲು ಡಸಾಲ್ಟ್ ಕಂಪನಿಯು ಡೆಫ್ಸಿಸ್ ಸೊಲ್ಯೂಶನ್ಸ್‌ನ 2017,ಮಾ.30ರ ಪ್ರೊಫಾರ್ಮಾ ಇನ್ವಾಯ್ಸಾ ಅಥವಾ ಮಾದರಿ ಬೆಲೆಪಟ್ಟಿಯನ್ನು ಒದಗಿಸಿತ್ತು ಎಂದಿದೆ.

ಆಗಸ್ಟಾ ವೆಸ್ಟ್‌ಲ್ಯಾಂಡ್‌ನಿಂದ ವಿವಿಐಪಿ ಹೆಲಿಕಾಪ್ಟರ್‌ಗಳ ಖರೀದಿಗಾಗಿ ಒಪ್ಪಂದದಲ್ಲಿ ಭಾರತದಲ್ಲಿ ಲಂಚ ಪಾವತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಗುಪ್ತಾರ ತನಿಖೆ ನಡೆಸುತ್ತಿವೆ. ಡಿಫ್ಸಿಸ್ ಭಾರತದಲ್ಲಿ ಡಸಾಲ್ಟ್‌ನ ಉಪಗುತ್ತಿಗೆದಾರ ಸಂಸ್ಥೆಗಳಲ್ಲೊಂದಾಗಿದೆ.

ವಿವಿಐಪಿ ಹೆಲಿಕಾಪ್ಟರ್ ಪ್ರಕರಣದಲ್ಲಿ ಈ ಹಿಂದೆ ಗುಪ್ತಾರನ್ನು ಬಂಧಿಸಲಾಗಿದ್ದು,ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು.

 ಎಎಫ್‌ಎ ಪರೀಕ್ಷಕರು ಡಸಾಲ್ಟ್‌ನಿಂದ ವಿವರಣೆಯನ್ನು ಕೇಳಿದ್ದರು. ತಲಾ 20,000 ಯುರೋಗಳ ವೆಚ್ಚದಲ್ಲಿ ತನ್ನದೇ ಸ್ವಂತ ವಿಮಾನದ ಪ್ರತಿಕೃತಿಯ ತಯಾರಿಕೆಗಾಗಿ ಭಾರತೀಯ ಕಂಪನಿಗೆ ಡಸಾಲ್ಟ್ ಏಕೆ ಬೇಡಿಕೆ ಸಲ್ಲಿಸಿತ್ತು? ಈ ವೆಚ್ಚವನ್ನು ‘ಗ್ರಾಹಕರಿಗೆ ಉಡುಗೊರೆಗಳು’ ಶೀರ್ಷಿಕೆಯಡಿ ತೋರಿಸಿದ್ದು ಏಕೆ? ಸಣ್ಣ ಕಾರಿನ ಗಾತ್ರದಲ್ಲಿರಬೇಕಿದ್ದ ಈ ಮಾದರಿಗಳು ಎಲ್ಲಿವೆ ? ಅವುಗಳನ್ನು ನಿಜಕ್ಕೂ ತಯಾರಿಸಲಾಗಿತ್ತೇ ಎಂಬಿತ್ಯಾದಿ ಪ್ರಶ್ನೆಗಳನ್ನು ಎಎಫ್‌ಎ ಮುಂದಿರಿಸಿತ್ತು.

  ರಫೇಲ್ ಪ್ರತಿಕೃತಿಗಳನ್ನು ತಯಾರಿಸಲಾಗಿತ್ತು ಮತ್ತು ಅವುಗಳನ್ನು ಪೂರೈಸಲಾಗಿತ್ತು ಎನ್ನುವುದನ್ನು ತೋರಿಸುವ ಒಂದೇ ಒಂದು ದಾಖಲೆಯನ್ನು ಒದಗಿಸಲು ಡಸಾಲ್ಟ್‌ಗೆ ಸಾಧ್ಯವಾಗಿರಲಿಲ್ಲ. ಅವುಗಳ ಫೋಟೊ ಕೂಡ ಅದರ ಬಳಿಯಿರಲಿಲ್ಲ. ಹೀಗಾಗಿ ಇದು ರಹಸ್ಯ ಹಣಕಾಸು ವಹಿವಾಟುಗಳನ್ನು ಮುಚ್ಚಿಡಲು ರೂಪಿಸಲಾಗಿದ್ದ ನಕಲಿ ಖರೀದಿಯಾಗಿತ್ತು ಎಂದು ಎಎಫ್‌ಎ ಪರೀಕ್ಷಕರು ಶಂಕಿಸಿದ್ದರು ಎಂದು ಮೀಡಿಯಾಪಾರ್ಟ್ ಹೇಳಿದೆ.

ಮೋದಿ ಉತ್ತರಕ್ಕೆ ಕಾಂಗ್ರೆಸ್ ಆಗ್ರಹ

ರಫೇಲ್ ಯುದ್ಧವಿಮಾನಗಳ ಒಪ್ಪಂದ ಕುರಿತು ಸಮಗ್ರ ತನಿಖೆ ನಡೆಯಬೇಕೆಂದು ಹೇಳಿರುವ ಕಾಂಗ್ರೆಸ್,ಡಸಾಲ್ಟ್ ಮಧ್ಯವರ್ತಿಗೆ 1.1 ಮಿ.ಯುರೋ ಪಾವತಿಸಿತ್ತು ಎಂಬ ಫ್ರೆಂಚ್ ಮಾಧ್ಯಮದ ಆರೋಪಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಉತ್ತರಿಸಬೇಕು ಎಂದು ಆಗ್ರಹಿಸಿದೆ.

ರಫೇಲ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ರಾಹುಲ್ ಗಾಂಧಿಯವರ ಪುನರಪಿ ಆರೋಪಗಳು ನಿಜವಾಗಿದ್ದವು ಎನ್ನುವುದನ್ನು ಮೀಡಿಯಾಪಾರ್ಟ್ ವರದಿಯು ಸಾಬೀತುಗೊಳಿಸಿದೆ ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News