×
Ad

ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್‍ಮುಖ್ ವಿರುದ್ಧ ಪ್ರಾಥಮಿಕ ತನಿಖೆ ನಡೆಸಲು ಸಿಬಿಐಗೆ ಬಾಂಬೆ ಹೈಕೋರ್ಟ್ ಆದೇಶ

Update: 2021-04-05 12:06 IST

ಮುಂಬೈ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ವಿರುದ್ದ ಮುಂಬೈ ಮಾಜಿ ಪೊಲೀಸ್ ಮುಖ್ಯಸ್ಥ ಪರಮ್‍ಬೀರ್ ಸಿಂಗ್ ಅವರ ಆರೋಪದ ಬಗ್ಗೆ 15 ದಿನಗಳೊಳಗೆ ಪ್ರಾಥಮಿಕ ತನಿಖೆ ನಡೆಸುವಂತೆ ಬಾಂಬೆ ಹೈಕೋರ್ಟ್ ಸಿಬಿಐಗೆ ಆದೇಶಿಸಿದೆ.

ದೇಶ್ ಮುಖ್ ವಿರುದ್ದ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಸುಲಿಗೆ ಹಾಗೂ ಅಕ್ರಮ ವರ್ಗಾವಣೆ ನಡೆಸುತ್ತಿದಾರೆ ಎಂದು ಆರೋಪಿಸಿ ತನಿಖೆ ನಡೆಸುವಂತೆ ಕೋರಿ ದೂರು ಸಲ್ಲಿಸಿದ ಬಳಿಕ ನನ್ನನ್ನು ಗುರಿಯಾಗಿಸಲಾಗಿದೆ ಎಂದು ಇತ್ತೀಚೆಗಷ್ಟೇ ಮುಂಬೈ ಪೊಲೀಸ್ ಮುಖ್ಯಸ್ಥ ಹುದ್ದೆಯನ್ನು ಕಳೆದುಕೊಂಡಿದ್ದ ಪರಮ್‍ಬೀರ್ ಮನವಿಯಲ್ಲಿ ತಿಳಿಸಿದ್ದಾರೆ.

ಈ ಹಿಂದಿನ ವಿಚಾರಣೆಯ ವೇಳೆ ಹೈಕೋರ್ಟ್, ಮಹಾರಾಷ್ಟ್ರ ಗೃಹ ಸಚಿವರ ವಿರುದ್ಧದ ಆರೋಪಕ್ಕೆ ಏಕೆ ಎಫ್ ಐಆರ್ ದಾಖಲಿಸಲಿಲ್ಲ ಎಂದು ಹೈಕೋರ್ಟ್ ಪರಮ್ ಬೀರ್ ಅವರನ್ನು ಪ್ರಶ್ನಿಸಿತ್ತು. 

ನೀವು ಪೊಲೀಸ್ ಆಯುಕ್ತರಾಗಿದ್ದೀರಿ. ಕಾನೂನನ್ನು ನಿಮಗಾಗಿ ಏಕೆ ಮೀಸಲಿಡಬೇಕು. ಪೊಲೀಸ್ ಅಧಿಕಾರಿಗಳು, ಮಂತ್ರಿಗಳು ಹಾಗೂ ರಾಜಕಾರಿಣಿಗಳು ಕಾನೂನಿಗಿಂತ ಮೇಲಿದ್ದಾರೆಯೇ? ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿಜೆ ದತ್ತಾ ಪ್ರಶ್ನಿಸಿದ್ದರು.

ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ಅವರ ಆರೋಪದ ಆಧಾರದ ಮೇಲೆ ಪೊಲೀಸ್ ವರ್ಗಾವಣೆ ಹಾಗೂ ಪೋಸ್ಟಿಂಗ್ ಗಳಲ್ಲಿ ದೇಶ್ ಮುಖ್ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಸಿಂಗ್ ಅವರು ಹೈಕೋರ್ಟ್‍ಗೆ ಸಲ್ಲಿಸಿರುವ ಅರ್ಜಿಯಲ್ಲಿ ಆರೋಪಿಸಿದ್ದರು.

ಆಡಳಿತಾರೂಢ ಶಿವಸೇನೆ ಹಾಗೂ ಎನ್ ಸಿಪಿ ಮೈತ್ರಿಕೂಟದಲ್ಲಿ ಬಿರುಕುಂಟು ಮಾಡಿರುವ ಈ  ಆರೋಪಗಳನ್ನು  ದೇಶ್ ಮುಖ್ ನಿರಾಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News