ದಾಳಿ ವೇಳೆ ನಾಪತ್ತೆಯಾಗಿದ್ದ ಸಿಆರ್ಪಿಎಫ್ ಯೋಧ ಮಾವೋವಾದಿಗಳ ವಶದಲ್ಲಿ: ವರದಿ

Update: 2021-04-05 18:43 GMT
photo: ANI

ರಾಯಪುರ,ಎ.5: ಛತ್ತೀಸ್‌ಗಡದ ಬಸ್ತರ್ ಪ್ರದೇಶದಲ್ಲಿ ಶನಿವಾರ ಭದ್ರತಾ ಸಿಬ್ಬಂದಿಗಳು ಮತ್ತು ಮಾವೋವಾದಿಗಳ ನಡುವಿನ ಗುಂಡಿನ ಕಾಳಗದ ಬಳಿಕ ನಾಪತ್ತೆಯಾಗಿರುವ ಸಿಆರ್‌ಪಿಎಫ್ ಕಾನ್‌ಸ್ಟೇಬಲ್ ರಾಕೇಶ್ವರ ಸಿಂಗ್ ಮನ್ಹಾಸ್ ಅವರಿಗಾಗಿ ನಡೆಯುತ್ತಿರುವ ತೀವ್ರ ಶೋಧ ಕಾರ್ಯಾಚರಣೆಯ ನಡುವೆಯೇ ಅವರು ಮಾವೋವಾದಿಗಳ ವಶದಲ್ಲಿದ್ದಾರೆ ಎಂಬ ವರದಿಗಳು ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿವೆ.

ತಮಗೆ ಮಾಹಿತಿಗಳು ತಲುಪಿವೆ ಎಂದು ಒಪ್ಪಿಕೊಂಡಿರುವ ಭದ್ರತಾ ವ್ಯವಸ್ಥೆಯಲ್ಲಿನ ಮೂಲಗಳು,ಆದರೆ ಯಾವುದೇ ಸಂಧಾನ ಪ್ರಕ್ರಿಯೆ ಆರಂಭಗೊಂಡಿಲ್ಲ ಎಂದು ಹೇಳಿವೆ. ಜಮ್ಮು ನಿವಾಸಿಯಾಗಿರುವ ಮನ್ಹಾಸ್ ಅವರನ್ನು ಮರಳಿಸಲು ಮಾವೋವಾದಿಗಳು ಈವರೆಗೆ ಯಾವುದೇ ಬೇಡಿಕೆಯನ್ನು ಮುಂದಿರಿಸಿಲ್ಲ ಎಂದೂ ಅವು ತಿಳಿಸಿವೆ.

ಮನ್ಹಾಸ್ ಇರುವಿಕೆಯ ಬಗ್ಗೆ ಮಾಹಿತಿಯ ಕೊರತೆಯು ಅವರು ಮಾವೋವಾದಿಗಳ ಒತ್ತೆಯಾಳಾಗಿರಬಹುದು ಎಂಬ ಆತಂಕವನ್ನು ಸೃಷ್ಟಿಸಿದೆ. ಅವರು ಮಾವೋವಾದಿಗಳ ವಶದಲ್ಲಿದ್ದಾರೆ ಎಂದು ಸ್ಥಳೀಯ ಪತ್ರಕರ್ತರಿಗೆ ಬರುತ್ತಿರುವ ದೃಢಪಡದ ಕರೆಗಳು ಈ ಆತಂಕವನ್ನು ಇನ್ನಷ್ಟು ಹೆಚ್ಚಿಸಿವೆ.

ತಾನು ಪೀಪಲ್ಸ್ ಲಿಬರೇಷನ್ ಗೆರಿಲ್ಲಾ ಆರ್ಮಿಯ ಬಟಾಲಿಯನ್ ನಂ.1ರ ಕಮಾಂಡರ್ ಹಿದ್ಮಾ ಎಂದು ಹೇಳಿಕೊಂಡ ವ್ಯಕ್ತಿ ಕರೆ ಮಾಡಿ,ಮನ್ಹಾಸ್ ಸುರಕ್ಷಿತವಾಗಿದ್ದಾರೆ,ಆದರೆ ಮಾವೋವಾದಿಗಳ ಒತ್ತೆಸೆರೆಯಲ್ಲಿದ್ದಾರೆ ಎಂದು ತಿಳಿಸಿದ್ದಾನೆ ಎಂದು ಸೋಮವಾರ ಬೆಳಿಗ್ಗೆ ಈ ಕರೆಯನ್ನು ಸ್ವೀಕರಿಸಿದ ಸ್ಥಳೀಯ ಟಿವಿ ಪತ್ರಕರ್ತರೋರ್ವರು ತಿಳಿಸಿದರು. ಇದೇ ಬಟಾಲಿಯನ್ ಶನಿವಾರ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿತ್ತು.

ಪ್ರಚಲಿತ ಸ್ಥಿತಿಯ ಬಗ್ಗೆ ಪೊಲೀಸರು ಬಾಯಿ ಬಿಡುತ್ತಿಲ್ಲವಾದರೆ,ಒತ್ತೆಯಾಳು ಬಿಕ್ಕಟ್ಟು ಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸಬಹುದು ಎಂದು ಬೆಳವಣಿಗೆಯನ್ನು ಬಲ್ಲ ಮೂಲಗಳು ಹೇಳಿವೆ.

ತನ್ಮಧ್ಯೆ ಜಮ್ಮುವಿನಲ್ಲಿ ಮನ್ಹಾಸ್ ಕುಟುಂಬವನ್ನು ಭೇಟಿಯಾದ ಸಿಆರ್‌ಪಿಎಫ್ ಅಧಿಕಾರಿಗಳು ಒತ್ತೆಸೆರೆ ಕುರಿತಂತೆ ಪತ್ರಕರ್ತನ ಹೇಳಿಕೆಯ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲು ತಮ್ಮ ಪಡೆ ಪ್ರಯತ್ನಿಸುತ್ತಿದೆ ಎಂದು ಭರವಸೆ ನೀಡಿದ್ದಾರೆ.

ಸಿಆರ್‌ಪಿಎಫ್ ಅಧಿಕಾರಿಗಳು ಮತ್ತು ಮನ್ಹಾಸ್ ಪತ್ನಿ ಮೀನು ಮನ್ಹಾಸ್ ಟಿವಿ ಪತ್ರಕರ್ತರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಮನ್ಹಾಸ್ ನಕ್ಸಲರ ಒತ್ತೆಸೆರೆಯಲ್ಲಿದ್ದಾರೆ ಎಂದು ಪತ್ನಿಗೆ ತಿಳಿಸಿದ ಪತ್ರಕರ್ತ,ಪತಿಯ ಬಿಡುಗಡೆಯನ್ನು ಕೋರಿ ವೀಡಿಯೊವೊಂದನ್ನು ಕಳುಹಿಸುವಂತೆ ಸೂಚಿಸಿದ್ದಾರೆ.

ತನ್ನ ಪತಿ ಸುರಕ್ಷಿತವಾಗಿ ಮರಳುವುದನ್ನು ಖಚಿತಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನೂ ಮೀನು ಮನ್ಹಾಸ್ ಕೋರಿಕೊಂಡಿದ್ದಾರೆ.

‘ಪಾಕಿಸ್ತಾನದಿಂದ ಅಭಿನಂದನ್ ವರ್ತಮಾನ್ ಅವರನ್ನು ವಾಪಸ್ ಕರೆತಂದಂತೆ ದಯವಿಟ್ಟು ನನ್ನ ಪತಿಯನ್ನೂ ವಾಪಸ್ ಕರೆತನ್ನಿನ ಎಂದು ಅವರು ಮೋದಿಯವರನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News