ಫೇಸ್ಬುಕ್‌ ಸಿಇಒ ಮಾರ್ಕ್‌ ಝುಕರ್ಬರ್ಗ್‌ ವೈಯಕ್ತಿಕ ಮಾಹಿತಿಯೂ ಸೋರಿಕೆ: ಸೈಬರ್‌ ತಜ್ಞ

Update: 2021-04-05 11:44 GMT

ವಾಷಿಂಗ್ಟನ್: ಫೇಸ್ ಬುಕ್ ಸಿಇಒ ಹಾಗೂ ಸಹ ಸ್ಥಾಪಕ ಮಾರ್ಕ್ ಝುರ್ಕೆಬರ್ಗ್ ಅವರ ವೈಯಕ್ತಿಕ ಮಾಹಿತಿಗಳೂ ಇತ್ತೀಚೆಗೆ ಸಂಭವಿಸಿದ ಬೃಹತ್ ದತ್ತಾಂಶ ಸೋರಿಕೆಯಲ್ಲಿ ಸುರಕ್ಷಿತವಾಗಿಲ್ಲ ಎಂದು ತಿಳಿದು ಬಂದಿದೆ. ಇತ್ತೀಚೆಗೆ 50 ಕೋಟಿ ಫೇಸ್ ಬುಕ್ ಖಾತೆಗಳ ಮಾಹಿತಿಗಳು ಸೋರಿಕೆಯಾಗಿವೆಯೆಂದು ವರದಿಗಳು ತಿಳಿಸಿದ್ದವು. ಈ ಸಂದರ್ಭ ಮಾರ್ಕ್ ಝುರ್ಕೆಬರ್ಗ್ ಅವರ ದೂರವಾಣಿ ಸಂಖ್ಯೆ ಮತ್ತಿತರ ಮಾಹಿತಿಗಳೂ ಸೋರಿಕೆಯಾಗಿವೆ ಎಂದು ಸೈಬರ್ ಸುರಕ್ಷತಾ ಸಂಶೋಧಕ ಡೇವ್ ವಾಕರ್ ತಿಳಿಸಿದ್ದಾರೆ. ಈ ಕುರಿತು ಅವರು ಟ್ವೀಟ್ ಕೂಡ ಮಾಡಿದ್ದಾರೆ.

ಆದರೆ ಸೋರಿಕೆಯಾದ ದತ್ತಾಂಶ ಬಹಳ ಹಳೆಯದು ಹಾಗೂ ಯಾರಿಗೂ ಹೆಚ್ಚಾಗಿ ಅಪಾಯವುಂಟು ಮಾಡದು ಎಂದು ಫೇಸ್ ಬುಕ್ ಹೇಳಿಕೊಂಡಿದೆ. ಈ ಸಮಸ್ಯೆಯನ್ನು ಆಗಸ್ಟ್ 2019ರಲ್ಲಿಯೇ ಸರಿಪಡಿಸಲಾಗಿದೆ ಎಂದು ಫೇಸ್ ಬುಕ್ ವಕ್ತಾರರೊಬ್ಬರು ಹೇಳಿರುವ ಕುರಿತು ವರದಿಯಾಗಿದೆ.

ಒಟ್ಟು 106 ದೇಶಗಳ ಫೇಸ್ ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿತ್ತು ಎಂದು ಈ ಕುರಿತು ಮೊದಲು ಮಾಹಿತಿ ನೀಡಿದ್ದ ಹಡ್ಸನ್ ರಾಕ್ ಸಂಸ್ಥೆಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಅಲೊನ್ ಗಲ್ ಹೇಳಿದ್ದರು. ಭಾರತದ ಸುಮಾರು 60 ಲಕ್ಷ ಫೇಸ್ ಬುಕ್ ಬಳಕೆದಾರರ ಮಾಹಿತಿ ಕೂಡ ಸೋರಿಕೆಯಾಗಿದೆ ಎಂದು ವರದಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News