ನಕ್ಸಲ್ ಪಿಡುಗು ಅಂತ್ಯಗೊಳಿಸಲು ಕೇಂದ್ರದ ದೃಢಸಂಕಲ್ಪ: ಅಮಿತ್ ಶಾ

Update: 2021-04-05 15:44 GMT

ರಾಯಪುರ (ಛತ್ತೀಸ್‌ಗಡ),ಎ.5: ರಾಜ್ಯದ ಬಸ್ತರ್ ಪ್ರದೇಶದಲ್ಲಿ ಮಾವೋವಾದಿಗಳಿಂದ 22 ಭದ್ರತಾ ಸಿಬ್ಬಂದಿಗಳ ಹತ್ಯೆಯ ನಂತರದ ಸ್ಥಿತಿಯನ್ನು ಸೋಮವಾರ ಅವಲೋಕಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ನಕ್ಸಲ್ ಪಿಡುಗನ್ನು ಅಂತ್ಯಗೊಳಿಸಲು ಬಂಡುಕೋರರ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗುವುದು ಎಂದು ಹೇಳಿದರು.

ಇಲ್ಲಿ ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್,ರಾಜ್ಯ ಪೊಲೀಸ್ ಇಲಾಖೆ ಮತ್ತು ಸಿಆರ್‌ಪಿಎಫ್‌ನ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾ,ಭದ್ರತಾ ಸಿಬ್ಬಂದಿಗಳ ತ್ಯಾಗವನ್ನು ದೇಶವು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತದೆ ಮತ್ತು ನಕ್ಸಲರ ವಿರುದ್ಧದ ಈ ಹೋರಾಟವನ್ನು ನಿರ್ಣಾಯಕ ಹಂತಕ್ಕೊಯ್ಯಲಾಗುವುದು ಎಂದರು.

ಶನಿವಾರ ಬಸ್ತರ್ ಪ್ರದೇಶದ ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಗಳ ಗಡಿಯಲ್ಲಿಯ ಜೋನಗುಡಾ ಮತ್ತು ತೇಕಲಗುಡಾ ಗ್ರಾಮಗಳ ನಡುವಿನ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳೊಂದಿಗೆ ನಡೆದ ಗುಂಡಿನ ದಾಳಿಯಲ್ಲಿ 22 ಭದ್ರತಾ ಸಿಬ್ಬಂದಿಗಳು ಕೊಲ್ಲಲ್ಪಟ್ಟು,ಇತರ 31 ಜನರು ಗಾಯಗೊಂಡಿದ್ದರು. ಓರ್ವ ಯೋಧ ಈಗಲೂ ನಾಪತ್ತೆಯಾಗಿದ್ದಾನೆ.

‘ನಕ್ಸಲರ ವಿರುದ್ಧದ ಈ ಹೋರಾಟ ನಿಲ್ಲುವುದಿಲ್ಲ ಮತ್ತು ಅಂತ್ಯದವರೆಗೂ ಇನ್ನಷ್ಟು ತೀವ್ರವಾಗಿ ಮುಂದುವರಿಯಲಿದೆ ಎಂದು ನಾನು ದೇಶಕ್ಕೆ ಭರವಸೆ ನೀಡಲು ಬಯಸುತ್ತೇನೆ. ಈ ಹೋರಾಟದ ಅಂತ್ಯದಲ್ಲಿ ಗೆಲುವು ಖಚಿತವಾಗಿ ನಮ್ಮದೇ ಆಗಿರುತ್ತದೆ ’ಎಂದ ಶಾ,ಕಳೆದ ಕೆಲವು ವರ್ಷಗಳಲ್ಲಿ ನಕ್ಸಲರ ವಿರುದ್ಧದ ಹೋರಾಟವು ನಿಣಾಯಕ ಹಂತವನ್ನು ತಲುಪಿದೆ ಮತ್ತು ಈ ದುರದೃಷ್ಟಕರ ಘಟನೆಯು ಹೋರಾಟವನ್ನು ಎರಡು ಹೆಜ್ಜೆ ಮುಂದಕ್ಕೊಯ್ದಿದೆ ಎಂದರು.

ಇದಕ್ಕೂ ಮುನ್ನ ಶಾ ನಕ್ಸಲರ ದಾಳಿಯಲ್ಲಿ ಸಾವನ್ನಪ್ಪಿದ ಭದ್ರತಾ ಸಿಬ್ಬಂದಿಗಳಿಗೆ ಪುಷ್ಪನಮನ ಸಲ್ಲಿಸಿದರು. ಬಿಜಾಪುರ ಜಿಲ್ಲೆಯ ಬಸಗುಡಾದ ಸಿಆರ್‌ಪಿಎಫ್ ಶಿಬಿರಕ್ಕೆ ಭೇಟಿ ನೀಡಿದ ಶಾ,ಗಾಯಾಳು ಭದ್ರತಾ ಸಿಬ್ಬಂದಿಗಳನ್ನು ದಾಖಲಿಸಲಾಗಿರುವ ರಾಯಪುರದ ಮೂರು ಆಸ್ಪತ್ರೆಗಳಿಗೂ ಭೇಟಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News