ಒಂದು ಕಾಲಲ್ಲಿ ಬಂಗಾಳ, ಎರಡು ಕಾಲಲ್ಲಿ ದಿಲ್ಲಿ ಗೆಲ್ಲುವೆ: ಮಮತಾ ಬ್ಯಾನರ್ಜಿ

Update: 2021-04-05 17:07 GMT

ಕೋಲ್ಕತಾ, ಎ.5: ನಾನು ಒಂದೇ ಕಾಲಿನಲ್ಲಿ ಬಂಗಾಳವನ್ನು ಗೆಲ್ಲಲಿದ್ದು ಮುಂದಿನ ದಿನದಲ್ಲಿ ಎರಡು ಕಾಲಿನಲ್ಲಿ ದಿಲ್ಲಿಯಲ್ಲಿ ಗೆಲುವು ಸಾಧಿಸುತ್ತೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಈಗ ನನ್ನ ಒಂದು ಕಾಲಿಗೆ ಬಿಜೆಪಿ ಬೆಂಬಲಿಗರಿಂದ ಗಾಯವಾಗಿದೆ.

ಆದರೆ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಪಡೆಯಲು ಒಂದೇ ಕಾಲು ಸಾಕು. ಮುಂದಿನ ದಿನದಲ್ಲಿ ಮತ್ತೊಂದು ಕಾಲು ಚೇತರಿಸಿಕೊಂಡ ಬಳಿಕ ದಿಲ್ಲಿಯಲ್ಲೂ ಗೆಲುವು ಸಾಧಿಸುತ್ತೇನೆ ಎಂದು ಹೇಳುವ ಮೂಲಕ, ಪಶ್ಚಿಮ ಬಂಗಾಳದಲ್ಲಿ ಗೆಲುವು ಸಾಧಿಸಿ ದಿಲ್ಲಿ ಗದ್ದುಗೆ ಏರುವ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ. ಚುಂಚುರಾ ವಿಧಾನಸಭೆ ಕ್ಷೇತ್ರವ್ಯಾಪ್ತಿಯಲ್ಲಿ ಸೋಮವಾರ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮಮತಾ, ಛತ್ತೀಸ್‌ಗಢದಲ್ಲಿ ನಕ್ಸಲರ ದಾಳಿಯಿಂದ 22 ಯೋಧರು ಹತರಾಗಿರುವುದನ್ನು ಉಲ್ಲೇಖಿಸಿ ಕೇಂದ್ರ ಸರಕಾರವನ್ನು ಟೀಕಿಸಿದರು.

ಶತಾಯ ಗತಾಯ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಗೆಲ್ಲಬೇಕೆಂದು ಯೋಜನೆ ರೂಪಿಸಿರುವ ಬಿಜೆಪಿ ದೇಶದ ಆಡಳಿತವನ್ನು ಸೂಕ್ತವಾಗಿ ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದರು. ದೇಶದೆಲ್ಲೆಡೆಯ ಮುಖಂಡರನ್ನು ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಸಮರ್ಥ ಸ್ಥಳೀಯ ಅಭ್ಯರ್ಥಿಗಳ ಕೊರತೆ ಎದುರಿಸುತ್ತಿರುವ ಬಿಜೆಪಿ, ಟಿಎಂಸಿ ಅಥವಾ ಎಡಪಕ್ಷಗಳ ಹಾಲಿ ಶಾಸಕರನ್ನು ಖರೀದಿಸಿ ಚುನಾವಣೆಗೆ ನಿಲ್ಲಿಸುವ ಪರಿಸ್ಥಿತಿಯಲ್ಲಿದೆ . ನೀರಿನಂತೆ ಹಣ ಚೆಲ್ಲಿದರೆ ಪಶ್ಚಿಮ ಬಂಗಾಳವನ್ನು ಗೆಲ್ಲಬಹುದು ಎಂಬ ಕನಸು ಕಾಣುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ವ್ಯಂಗ್ಯವಾಡಿದರು.

ಚುನಾವಣೆ ಪ್ರಚಾರ ಕಾರ್ಯದ ಸಂದರ್ಭ ಮಮತಾ ಬ್ಯಾನರ್ಜಿ ಹಲವು ಬಾರಿ ತಮ್ಮ ವಿರುದ್ಧ ನಿಂದನೀಯ ಪದಬಳಕೆ ಮಾಡಿದ್ದಾರೆ ಎಂದು ಆರೋಪಿಸಿದ್ದ ಪ್ರಧಾನಿ ನರೇಂದ್ರ ಮೋದಿ ಕೆಲ ದಿನಗಳ ಹಿಂದೆ ನಡೆದ ರ್ಯಾಲಿಯಲ್ಲಿ ತನ್ನನ್ನು ಉದ್ದೇಶಿಸಿ ‘ದೀದಿ ಓ ದೀದಿ’ ಎಂದು ಕರೆದಿರುವುದನ್ನು ಉಲ್ಲೇಖಿಸಿದ ಮಮತಾ ಬ್ಯಾನರ್ಜಿ, ಇದನ್ನು ಅವರು ದಿನಾ ಮಾಡುತ್ತಿರುತ್ತಾರೆ. ಇದಕ್ಕೆಲ್ಲಾ ಹೆದರುವ ಪ್ರಶ್ನೆಯೇ ಇಲ್ಲ ಎಂದರು. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯನ್ನು 8 ಹಂತಗಳಲ್ಲಿ ನಡೆಸುವ ನಿರ್ಧಾರದ ಹಿಂದೆ ಯಾವ ಉದ್ದೇಶವಿದೆ ಎಂದು ಪ್ರಶ್ನಿಸಿದ ಮಮತಾ, ಇದು ಬಿಜೆಪಿಯ ಚಿಂತಕರ ಚಾವಡಿಯ ನಿರ್ಧಾರವಾಗಿದೆ. ಚುನಾವಣೆಯನ್ನು 3-4 ಹಂತದಲ್ಲಿ ಮುಗಿಸಬಹುದಿತ್ತು. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಕಡಿಮೆ ಹಂತದಲ್ಲಿ ಚುನಾವಣಾ ಪ್ರಕ್ರಿಯೆ ಮುಗಿಸಿಬಿಡುವುದು ಅತ್ಯಂತ ಜಾಣ್ಮೆಯ ನಿರ್ಧಾರವಾಗುತ್ತಿತ್ತು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News