ಬೇಟೆಗೆಂದು ಹೋದವರಲ್ಲಿ ಒಬ್ಬ ಗುಂಡೇಟಿಗೆ ಬಲಿ: ಮೂವರು ಆತ್ಮಹತ್ಯೆ
Update: 2021-04-05 22:42 IST
ಡೆಹ್ರಾಡೂನ್, ಎ.5: ಬೇಟೆಗೆಂದು ಹೋದ ಮಿತ್ರರಲ್ಲಿ ಒಬ್ಬ ಗುಂಡೇಟಿನಿಂದ ಗಾಯಗೊಂಡು ಮೃತಪಟ್ಟರೆ, ಇತರ ಮೂವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಾಖಂಡದ ತೆಹ್ರಿ ಜಿಲ್ಲೆಯ ಕುಂದಿ ಗ್ರಾಮದಲ್ಲಿ ನಡೆದಿರುವುದಾಗಿ ಅಧಿಕಾರಿಗಳು ರವಿವಾರ ಹೇಳಿದ್ದಾರೆ.
ಶನಿವಾರ ರಾತ್ರಿ 7 ಮಿತ್ರರು ಬೇಟೆಗೆಂದು ಕಾಡಿಗೆ ತೆರಳಿದ್ದಾರೆ. ಇವರಲ್ಲಿ ರಾಜೀವ್ ಎಂಬಾತನ ಬಳಿ ಲೋಡ್ ಮಾಡಿದ್ದ ಬಂದೂಕು ಇತ್ತು. ಎಲ್ಲರಿಗಿಂತ ಮುಂದೆ ಹೆಜ್ಜೆ ಹಾಕುತ್ತಿದ್ದ ರಾಜೀವ್ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಾಗ ಗುಂಡು ಹಾರಿ ಹಿಂದಿನಿಂದ ಬರುತ್ತಿದ್ದ ಸಂತೋಷ್‌ಗೆ ತಗುಲಿದ್ದು ತೀವ್ರ ರಕ್ತಸ್ರಾವದಿಂದ ಸಂತೋಷ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದರಿಂದ ಗಾಬರಿಗೊಂಡ ರಾಜೀವ ಅಲ್ಲಿಂದ ಓಡಿಹೋದರೆ, ಸೊಬಾನ್, ಪಂಕಜ್ ಮತ್ತು ಅರ್ಜುನ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಹುಲ್ ಮತ್ತು ಸುಮಿತ್ ಊರಿಗೆ ಬಂದು ಸ್ಥಳೀಯರಲ್ಲಿ ನಡೆದ ವಿಷಯದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.