ಉ.ಪ್ರ. ಮುಖ್ಯಮಂತ್ರಿ ನಿಂದಿಸುವ ವೀಡಿಯೊ ವೈರಲ್ ನಕಲಿ ಎಂದ ಆದಿತ್ಯನಾಥ್ ಅವರ ಮಾಧ್ಯಮ ಸಲಹೆಗಾರ

Update: 2021-04-05 17:58 GMT

ಲಕ್ನೋ, ಎ. 5: ಸುದ್ದಿ ಸಂಸ್ಥೆಯ ಪತ್ರಿಕಾ ಛಾಯಾಗ್ರಾಹಕನ ವಿರುದ್ಧ ಉತ್ತರಪ್ರದೇಶದ ಮುಖ್ಯಮಂತ್ರಿ ನಿಂದನಾತ್ಮಕ ಪದ ಬಳಸಿದ ವೈರಲ್ ವೀಡಿಯೊ ಎಡಿಟ್ ಮಾಡಿರುವುದು ಹಾಗೂ ಇದರ ಕೊನೆಯ ಕೆಲವು ಸೆಕಂಡುಗಳಲ್ಲಿ ನಕಲಿ ಅಡಿಯೊ ಸೇರಿಸಲಾಗಿದೆ ಎಂದು ಪ್ರತಿಪಾದಿಸಿ ಆದಿತ್ಯನಾಥ್ ಅವರ ಮಾಧ್ಯಮ ಸಲಹೆಗಾರ ‘ಫ್ಯಾಕ್ಟ್-ಚೆಕ್’ ವರದಿಯೊಂದನ್ನು ಟ್ವೀಟ್ ಮಾಡಿದ್ದಾರೆ.

ಉತ್ತರಪ್ರದೇಶದ ಮುಖ್ಯಮಂತ್ರಿ ವಿರುದ್ಧ ಟ್ವಿಟ್ಟರ್‌ನಲ್ಲಿ ತರಾಟೆಗೆ ತೆಗೆದುಕೊಂಡವರಲ್ಲಿ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಕೂಡ ಸೇರಿದ್ದಾರೆ. ಹಿಂದಿಯಲ್ಲಿ ಟ್ವೀಟ್ ಮಾಡಿದ ಅಖಿಲೇಶ್ ಯಾದವ್, ‘‘ಪತ್ರಕರ್ತರಿಗೆ ಶ್ರೇಷ್ಠ ವ್ಯಕ್ತಿ ಬಳಸಿರುವ ಸಿಹಿಯಾದ ಪದಗಳನ್ನು ದಯವಿಟ್ಟು ಆಲಿಸಿ. ಆದರೆ, ಹೆಡ್ ಫೋನ್ ಬಳಸಿ. ಮಕ್ಕಳನ್ನು ದೂರ ಇರಿಸಿ’’ ಎಂದಿದ್ದಾರೆ. ಆದರೆ, ಅವರು ವೀಡಿಯೊವನ್ನು ಶೇರ್ ಮಾಡಿಲ್ಲ. ಎಎನ್‌ಐ ಸುದ್ದಿ ಸಂಸ್ಥೆಯ ಪತ್ರಿಕಾ ಛಾಯಾಗ್ರಾಹಕನಿಗೆ ಆದಿತ್ಯನಾಥ್ ಬಳಸಿದ ನಿಂದನಾತ್ಮಕ ಪದ ಹಠಾತ್ತಾಗಿ ನಿಂತಂತೆ ಕಾಣುವ ವೀಡಿಯೊವನ್ನು ಇತರ ಟ್ವಿಟ್ಟರ್ ಬಳಕೆದಾರರು ಕೂಡ ಶೇರ್ ಮಾಡಿದ್ದರು. ಇಂದು ಬೆಳಗ್ಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ಅನ್ನು ತೆಗೆದುಕೊಂಡ ಬಳಿಕ ಮುಖ್ಯಮಂತ್ರಿ ಮಾತನಾಡುವ ಸಂದರ್ಭ ಈ ನಿಂದನಾತ್ಮಕ ಪದ ಬಳಸಿದ್ದರು ಎಂದು ಹೇಳಲಾಗುತ್ತಿದೆ.

ಈ ವೀಡಿಯೊ ಆನ್‌ಲೈನ್‌ನಲ್ಲಿ ಹೆಚ್ಚು ಹೆಚ್ಚು ವೀಕ್ಷಣೆಯಾಗುತ್ತಿದ್ದಂತೆ ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ ಶಲಭ್ ಮಣಿ ತ್ರಿಪಾಠಿ ಅವರು ಮುಖ್ಯಮಂತ್ರಿ ನಿಂದನಾತ್ಮಕ ಪದ ಬಳಸಿದ ವೀಡಿಯೊ ತುಣುಕಿನ ಕೊನೆಯ 3 ಸೆಕಂಡ್ ತಿರುಚಲಾಗಿದೆ ಎಂದು ಪ್ರತಿಪಾದಿಸಿರುವ ‘ಬ್ರೇಕಿಂಗ್ ಟ್ಯೂಬ್’ನ ‘ಫಾಸ್ಟ್ ಚೆಕ್’ ವರದಿಯನ್ನು ಟ್ವೀಟ್ ಮಾಡಿದ್ದಾರೆ. ಎಎನ್‌ಐ ಆದಿತ್ಯನಾಥ್ ಅವರ 5 ನಿಮಿಷಗಳ ಹೊಸ ವೀಡಿಯೊ ತುಣುಕನ್ನು ಟ್ವೀಟ್ ಮಾಡಿದೆ. ಅಲ್ಲದೆ, ಟ್ವೀಟ್‌ನಲ್ಲಿ ‘‘ಸಂಪಾದಕರ ಟಿಪ್ಪಣಿ: ಈ ಹಿಂದೆ ಬಿಡುಗಡೆ ಮಾಡಲಾದ ಲೈವ್ ಶಬ್ದದ ತುಣುಕನ್ನು ಹಿಂಪಡೆಯಲಾಗಿದೆ’’ ಎಂದಿದೆ. ಮೊದಲ ಬಾರಿ ಈ ವೀಡಿಯೊವನ್ನು ನಿವೃತ್ತ ಐಎಎಸ್ ಅಧಿಕಾರಿ ಸೂರ್ಯ ಪ್ರತಾಪ್ ಸಿಂಗ್ ಟ್ವೀಟ್ ಮಾಡಿದ್ದರು. ‘‘ಇದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿಜವಾದ ಮುಖ. ಸಂತನ ಭಾಷೆ ಆಲಿಸಿ’’ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News