ಬಾಂಗ್ಲಾದೇಶದ ದುಷ್ಕರ್ಮಿಗಳಿಂದ ಬಿಎಸ್‌ಎಫ್ ಸಿಬ್ಬಂದಿ ಮೇಲೆ ದಾಳಿ
ಕೋಲ್ಕತಾ,ಎ.5: ಅಂತರರಾಷ್ಟ್ರೀಯ ಗಡಿಗೆ ಸಮೀಪದ ಭಾರತದ ಭಾಗದಲ್ಲಿ ಶಂಕಿತ ಬಂಡಲ್‌ವೊಂದನ್ನು ಎತ್ತಿಕೊಳ್ಳಲು ಪ್ರಯತ್ನಿಸುತ್ತಿದ್ದ ಬಾಂಗ್ಲಾದೇಶಿ ಕಳ್ಳಸಾಗಣೆದಾರರ ಗುಂಪೊಂದು ಬಿಎಸ್‌ಎಫ್ ಸಿಬ್ಬಂದಿಯೋರ್ವನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದೆ. ಗಾಯಾಳು ಸಿಬ್ಬಂದಿಯನ್ನು ದಿನ್‌ಹಾತಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ರಾತ್ರಿ 9:30ರ ಸುಮಾರಿಗೆ ಕೂಚ್‌ಬೆಹಾರ್ ವಿಭಾಗದ ನಾರಾಯಣಗಂಜ್ ಗಡಿಠಾಣೆಯ ಸಮೀಪ ಗಡಿಬೇಲಿಯ ಬಳಿ ಬಿಎಸ್‌ಎಫ್ ಸಿಬ್ಬಂದಿಗಳು ಕರ್ತವ್ಯನಿರತರಾಗಿದ್ದಾಗ ಈ ಘಟನೆ ಸಂಭವಿಸಿದೆ. ಈ ಸ್ಥಳವು ಅಂತರರಾಷ್ಟ್ರೀಯ ಗಡಿಯಿಂದ ಸುಮಾರು 250 ಮೀ.ಮತ್ತು ಗಡಿಠಾಣೆಯಿಂದ 3,400 ಮೀ.ಅಂತರದಲ್ಲಿದೆ.
ಕೆಲವು ಭಾರತೀಯ ಕಳ್ಳಸಾಗಣೆದಾರರು ತಮ್ಮ ಚಲನವಲನಗಳು ಗೋಚರಿಸದಂತೆ ಮತ್ತು ಅಕ್ರಮ ಸರಕುಗಳ ಬಂಡಲ್‌ವೊಂದನ್ನು ಎಸೆಯಲು ಅಂತರರಾಷ್ಟ್ರೀಯ ಗಡಿಬೇಲಿಯ ಬಳಿ ತಲುಪಲು ಗಡಿಬೇಲಿಯ ದೀಪಗಳಿಗೆ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಿದ್ದರು. ಇದೇ ವೇಳೆ ಅಂತರರಾಷ್ಟ್ರೀಯ ಗಡಿಬೇಲಿಯ ಎದುರು ಎರಡು ಗುಂಪುಗಳಲ್ಲಿ ಐದಾರು ಬಾಂಗ್ಲಾದೇಶಿಗಳ ಚಲನವಲನಗಳನ್ನು ಮತ್ತು ಬಂಡಲ್‌ನ್ನು ಎತ್ತಿಕೊಳ್ಳಲು ಭತ್ತದ ಗದ್ದೆಗಳಲ್ಲಿ ಅವಿತುಕೊಳ್ಳುತ್ತ ಭಾರತೀಯ ಭಾಗದತ್ತ ಬರುತ್ತಿರುವುದನ್ನು ಬಿಎಸ್‌ಎಫ್ ತಂಡವು ಗಮನಿಸಿತ್ತು. ಒಂದು ಗುಂಪಿನತ್ತ ಒಂದು ಸ್ಟನ್ ಗ್ರೆನೇಡ್‌ನ್ನು ಎಸೆದ ಬಿಎಸ್‌ಎಫ್ ಯೋಧರು ಇನ್ನೊಂದು ಗುಂಪಿನತ್ತ ಪಂಪ್ ಆ್ಯಕ್ಷನ್ ಗನ್‌ನಿಂದ ಒಂದು ಸುತ್ತು ಗುಂಡು ಹಾರಿಸಿದ್ದರು. ಇದಕ್ಕೆ ಉತ್ತರವಾಗಿ ಬಿಎಸ್‌ಎಫ್ ತಂಡದತ್ತ ಆಕ್ರಮಣಕಾರಿಯಾಗಿ ಮುನ್ನುಗ್ಗಿ ಬಂದ ಕಳ್ಳಸಾಗಣೆದಾರರು ಓರ್ವ ಸಿಬ್ಬಂದಿಯ ಕಣ್ಣಿನ ಬಳಿ ಟಾರ್ಚ್‌ನಿಂದ ಹೊಡೆದಿದ್ದರು. ಇತರ ಬಿಎಸ್‌ಎಫ್ ಸಿಬ್ಬಂದಿಗಳು ರಕ್ಷಣೆಗಾಗಿ ಧಾವಿಸಿದಾಗ ಕಳ್ಳಸಾಗಣೆದಾರರು ಸ್ಥಳದಿಂದ ಪರಾರಿಯಾಗಿದ್ದರು ಎಂದು ಬಿಎಸ್‌ಎಫ್ ತಿಳಿಸಿದೆ.
ಸ್ಥಳದಿಂದ ಒಂದು ಮೊಬೈಲ್ ಫೋನ್,ಎರಡು ಬಾಂಗ್ಲಾದೇಶಿ ಸಿಮ್ ಕಾರ್ಡ್‌ಗಳು ಮತ್ತು ಟಾರ್ಚ್‌ನ್ನು ಬಿಎಸ್‌ಎಫ್ ವಶಪಡಿಸಿಕೊಂಡಿದೆ.