ಕಾಸರಗೋಡು ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಉತ್ತಮ ಮತದಾನ

Update: 2021-08-07 05:59 GMT

ಕಾಸರಗೋಡು : ಕೇರಳ ವಿಧಾನಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು , ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಮೊದಲ ಗಂಟೆಗಳಲ್ಲಿ   ಉತ್ತಮ ಮತದಾನವಾಗಿದೆ.

ಬೆಳಗ್ಗೆಯಿಂದಲೇ ಮತಗಟ್ಟೆಗಟ್ಟೆಗಳಲ್ಲಿ ಸರದಿ ಸಾಲು ಕಂಡುಬಂದಿತ್ತು.  ಜಿಲ್ಲೆಯ 1691 ಮತಗಟ್ಟೆಗಳಲ್ಲಿ 10.59 ಲಕ್ಷ ಮತದಾರರಿದ್ದಾರೆ. ಐದು ವಿಧಾನಸಭಾ ಕ್ಷೇತ್ರಗಳಲ್ಲಿ 38 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ . ಅಭ್ಯರ್ಥಿಗಳು ಬೆಳಗ್ಗೆಯೇ ಮತಗಟ್ಟೆಗೆ ತಲಪಿ ತಮ್ಮ ಹಕ್ಕು ಚಲಾಯಿಸಿದ್ದಾರೆ.  9.15ರ ತನಕ ಜಿಲ್ಲೆಯಲ್ಲಿ 14.23 ಶೇಕಡಾ ಮತದಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಞಂಗಾಡ್ ನ  ಸಿಪಿಐ ಅಭ್ಯರ್ಥಿ ಇ. ಚಂದ್ರಶೇಖರನ್ ಕೋಳಿಯಡ್ಕ ಸರಕಾರಿ ಯುಪಿ ಶಾಲೆಯ 33ನೇ ಮತಗಟ್ಟೆಯಲ್ಲಿ ಬೆಳಗ್ಗೆ ಮತ ಚಲಾಯಿಸಿದರು. ಕಾಸರಗೋಡು ಯುಡಿಎಫ್ ಅಭ್ಯರ್ಥಿ ಎನ್.ಎ ನೆಲ್ಲಿಕುನ್ನು ಅವರು ನೆಲ್ಲಿಕುಂಜೆ ಸರಕಾರಿ ಹಯರ್ ಸೆಕಂಡರಿ ಶಾಲಾ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಕಾಸರಗೋಡು ಬಿಜೆಪಿ ಅಭ್ಯರ್ಥಿ ಕೆ. ಶ್ರೀಕಾಂತ್ ಬೇಕಲ ಸರಕಾರಿ ಫಿಷರೀಶ್ ಹೈಸ್ಕೂಲ್  ನ  105ನೇ ಮತಗಟ್ಟೆಯಲ್ಲಿ  ಮತ ಚಲಾಯಿಸಿದರು. ಎಲ್ ಡಿ ಎಫ್ ಅಭ್ಯರ್ಥಿ ಎಂ.ಎ ಲತೀಫ್ ಪಳ್ಳಿಕೆರೆ ಕಲ್ಲಿಂಗಾಳ್ ಸರಕಾರಿ ಮಾಪಿಳ್ಳ ಯು.ಪಿ ಶಾಲಾ ಮತಗಟ್ಟೆಯಲ್ಲಿ  ಮತ ಚಲಾಯಿಸಿದರು.

ಉದುಮದ ಎಲ್ ಡಿ ಎಫ್ ಅಭ್ಯರ್ಥಿ ಸಿ.ಎಚ್ ಕುಞಾಂಬು ಅಣಂಗೂರು ಜಿಎಲ್ ಪಿ ಶಾಲಾ 156ನೇ ಮತಗಟ್ಟೆಯಲ್ಲಿ ಬೆಳಗ್ಗೆ ತಮ್ಮ ಹಕ್ಕು ಚಲಾಯಿಸಿದರು. ಮಂಜೇಶ್ವರ ಯುಡಿಎಫ್ ಅಭ್ಯರ್ಥಿ  ಎ.ಕೆ.ಎಂ ಅಶ್ರಫ್ ಕಡಂಬಾರು ಶಾಲಾ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಜಿಲ್ಲೆಯ 738  ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಲೈವ್ ವ್ಯವಸ್ಥೆ ಮಾಡಲಾಗಿದ್ದು, ಕಾಸರಗೋಡು ಸಿವಿಲ್ ಸ್ಟೇಷನ್ ನ  ಪಂಚಾಯತ್ ಉಪನಿರ್ದೇಶಕರ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ತೆರೆಯಲಾಗಿದೆ. ಈ ಮತಗಟ್ಟೆಗಳ ಬಗ್ಗೆ ಜಿಲ್ಲಾಧಿಕಾರಿ , ಚುನಾವಣಾ ವೀಕ್ಷಕರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ನಿಗಾ ಇರಿಸಿದ್ದಾರೆ.  ನಕಲಿ ಮತದಾನ , ಒಂದಕ್ಕಿಂತ ಹೆಚ್ಚಿನ ಮತದಾನ, ಮತಗಟ್ಟೆಯಲ್ಲಿ  ಅಹಿತಕರ ಘಟನೆ ತಡೆಗಟ್ಟುವ ಹಿನ್ನಲೆಯಲ್ಲಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

9:45ರ ಸುಮಾರಿಗೆ ಕಾಸರಗೋಡು ಜಿಲ್ಲೆಯಲ್ಲಿ 15.20% ಮತದಾನವಾಗಿದೆ. ಮಂಜೇಶ್ವರ 15.47 %, ಕಾಸರಗೋಡು 13.67%, ಉದುಮ 15.07%, ಕಾಞಂಗಾಡ್ 15.94%, ತ್ರಿಕರಿಪುರ್ 15.74% ಮತದಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News