×
Ad

ಪಶ್ಚಿಮ ಬಂಗಾಳ : ಟಿಎಂಸಿಗೆ ಹಲವು ಬಿಜೆಪಿ ಮುಖಂಡರ ಸೇರ್ಪಡೆ

Update: 2021-04-06 10:38 IST

ಕೊಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಜ್ವರದ ನಡುವೆಯೇ ಹಲವು ಮಂದಿ ಬಿಜೆಪಿ ಮುಖಂಡರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೋಮವಾರ ಸೇರ್ಪಡೆಗೊಂಡರು.

ಬಿಜೆಪಿ ಮುಖಂಡರಾಗಿದ್ದ ಪ್ರಿಯಾಂಶು ಪಾಂಡೆ, ರಬಿ ಸಿಂಗ್, ಸುರೋಜಿತ್ ಬಿಸ್ವಾಸ್ ಮತ್ತು ಅಖಿಲೇಶ್ ಮಲ್ಹಾ, ರಾಜ್ಯದ ಸಚಿವ ಪೂರ್ಣೇಂದು ಬಸು ಮತ್ತು ಸಂಸದ ದೋಲಾ ಸೇನ್ ಸಮ್ಮುಖದಲ್ಲಿ ತೃಣಮೂಲ ಭವನದಲ್ಲಿ ಟಿಎಂಸಿ ಸೇರಿಕೊಂಡರು.

"ರಾಜ್ಯದಲ್ಲಿ ಮಮತಾ ಬ್ಯಾನರ್ಜಿಯವರು ಮಾಡಿದ ಕಾರ್ಯಗಳನ್ನು ನೋಡಿ ಟಿಎಂಸಿ ಧ್ವಜ ಹಿಡಿಯುತ್ತಿದ್ದೇವೆ. ಟಿಎಂಸಿ ಸಾಗರ ಇದ್ದಂತೆ. ವಿವಿಧೆಡೆಗಳ ಜನ ಟಿಎಂಸಿ ಸೇರಿರುವುದನ್ನು ನೀವು ಕಂಡಿರಬಹುದು. ರಾಜ್ಯದಲ್ಲಿ ಮತ್ತೆ ಟಿಎಂಸಿ ಸರ್ಕಾರ ರಚನೆಯಾಗುವುದು ನಿಸ್ಸಂದೇಹ" ಎಂದು ಬಸು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪಾಂಡೆ ಬಿಜೆಪಿ ಯುವಮೋರ್ಚಾ ರಾಜ್ಯ ಸಮಿತಿ ಸದಸ್ಯರಾಗಿದ್ದು, ಸಿಂಗ್ ಬರ್ರಾಕ್‌ಪುರ ಜಿಲ್ಲಾ ಸಮಿತಿ ಸದಸ್ಯ ಎಂದು ಎಐಟಿಸಿ ಪ್ರಕಟಣೆ ಹೇಳಿದೆ. ಬಿಸ್ವಾನ್ ಬಿಜೆಪಿ ಬರ್ರಾಕ್‌ಪುರ ಜಿಲ್ಲಾ ಸಮಿತಿಯ ಎಸ್ಸಿ ಮೋರ್ಚಾ ಉಪಾಧ್ಯಕ್ಷರಾಗಿದ್ದು, ಮೊಲ್ಹಾ, ಭಾರತೀಯ ಮಜ್ದೂರ್ ಟ್ರೇಡ್ ಯೂನಿಯನ್ ಕೌನ್ಸಿಲ್‌ನ ಪ್ರಧಾನ ಕಾರ್ಯದರ್ಶಿ. ಪಕ್ಷಕ್ಕೆ ಸೇರ್ಪಡೆಗೊಳ್ಳಲು ಅವಕಾಶ ನೀಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಅಳಿಯ ಅಭಿಷೇಕ್ ಬ್ಯಾನರ್ಜಿಯವರಿಗೆ ಪಾಂಡೆ ಕೃತಜ್ಞತೆ ಸಲ್ಲಿಸಿದರು.

"ಬಿವೈಜೆಎಂನಲ್ಲಿ ನಬನ್ನ ಅಭಿಯಾನ್ ಚಳವಳಿ ಆರಂಭಿಸಿದ ವ್ಯಕ್ತಿ ನಾನು. ಆದರೆ ಬಿಜೆಪಿ ಇಂದು ಅದೇ ಪಕ್ಷವಾಗಿ ಉಳಿದಿಲ್ಲ ಎನ್ನಲು ನನಗೆ ಅವಮಾನವಾಗುತ್ತಿದೆ. ಟಿಎಂಸಿಗೆ ದ್ರೋಹ ಮಾಡಿದವರು ಬಂಗಾಳದಲ್ಲಿ ಬಿಜೆಪಿಯಲ್ಲಿದ್ದಾರೆ" ಎಂದು ಪ್ರಿಯಾಂಶು ಪಾಂಡೆ ಟೀಕಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧವೂ ಅವರು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News