×
Ad

ಮತದಾನ ಕೇಂದ್ರದಿಂದ ಅಭ್ಯರ್ಥಿಯನ್ನು ಅಟ್ಟಿಸಿಕೊಂಡು ಹೋಗಿ ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತರು: ಟಿಎಂಸಿ ಆರೋಪ

Update: 2021-04-06 14:35 IST
Photo: Twitter(@PoulomiMSaha)

ಕೋಲ್ಕತಾ: ಪಶ್ಚಿಮಬಂಗಾಳ ರಾಜ್ಯದಲ್ಲಿ ಮೂರನೇ ಹಂತದ ವಿಧಾನಸಭಾ ಚುನಾವಣೆ ಮಂಗಳವಾರ ನಡೆಯುತ್ತಿದ್ದು, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‍ನ ಮಹಿಳಾ ಅಭ್ಯರ್ಥಿಯೊಬ್ಬರನ್ನು ಮತಗಟ್ಟೆಯ ಹೊರಗೆ ಅಟ್ಟಿಸಿಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆನ್ನಲಾದ ಘಟನೆ ವರದಿಯಾಗಿದೆ.

ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಸುಜಾತಾ ಮೊಂಡಾಲ್ ರನ್ನು ಜನರ ಗುಂಪೊಂದು ಹೊಲದ ಮಧ್ಯೆ ಕೈಯಲ್ಲಿ ಲಾಠಿ ಹಿಡಿದು ಬೆನ್ನಟ್ಟಿದೆ.

ಬಿಜೆಪಿ ಕಾರ್ಯಕರ್ತರು ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಸುಜಾತಾ ಅವರನ್ನು ಬೆನ್ನಟ್ಟಿದ್ದು, ಮತದಾನದ ಕೇಂದ್ರದ ಬಳಿ ಅವರ ತಲೆಗೆ ಹಲ್ಲೆ ಮಾಡಿದ್ದಾರೆ. ಘಟನೆಯ ವೇಳೆ ಭದ್ರತಾ ಸಿಬ್ಬಂದಿಗೆ ಗಾಯವಾಗಿದೆ ಎಂದು ಟಿಎಂಸಿ ಆರೋಪಿಸಿದೆ.

ಅರಂಬಾಗ್ ನ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸುಜಾತಾ ಮೊಂಡಾಲ್ ಖಾನ್ ಅವರನ್ನು ಕ್ಷೇತ್ರದ ಅರಾಂಡಿ ಪ್ರದೇಶದ ಮತದಾನ ಕೇಂದ್ರದಿಂದ ಅಟ್ಟಿಸಿಕೊಂಡು ಹೋಗಲಾಗಿತ್ತು.

ಮತದಾನ ನಡೆಯುತ್ತಿರುವಾಗ ಅರಂಬಾಗ್ ನಲ್ಲಿ ತೃಣಮೂಲ ಬೆಂಬಲಿಗರಿಗೆ ಬೆದರಿಕೆ ಹಾಕುವ ಮೂಲಕ ಬಿಜೆಪಿ ಅವ್ಯವಸ್ಥೆ ಸೃಷ್ಟಿಸಿತ್ತು ಎಂದು ಸುಜಾತಾ ಆರೋಪಿಸಿದರು. ಈ ಆರೋಪವನ್ನು ಬಿಜೆಪಿ ನಿರಾಕರಿಸಿದೆ.

ಬಟನಾಲ್ ನ ಬೂತ್ ಸಂಖ್ಯೆ 45ರಲ್ಲಿ ಟಿಎಂಸಿಯ ಚಿಹ್ನೆಯನ್ನು ಒತ್ತಿದರೂ ಮತವು ಬಿಜೆಪಿಗೆ ಹೋಗುತ್ತಿದೆ. ನನಗೆ ಜನರ ಆಶೀರ್ವಾದ ಸಿಗುವ ನಂಬಿಕೆ ಇದೆ. ಅರಾಂಡಿಯಲ್ಲಿ ನಮ್ಮ ಕಾರ್ಯಕರ್ತರನ್ನು ಥಳಿಸಲಾಗಿದೆ. ಬಿಜೆಪಿ ಹಿಂಸಾಚಾರವನ್ನು ಸೃಷ್ಟಿಸುವ ಮೂಲಕ ಅರಂಬಾಗ್ ನಲ್ಲಿ ಗೆಲುವು ಪಡೆಯಬಹುದು ಎಂದು ಭಾವಿಸಿದೆ. ನಾನು ಸಾವಿಗೆ ಹೆದರುವ ವ್ಯಕ್ತಿಯಲ್ಲ ಎಂದು ಸುದ್ದಿಸಂಸ್ಥೆ ಎಎನ್ ಐಗೆ ಸುಜಾತಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News