ಪತ್ರಕರ್ತರ ಮೇಲಿನ ಪುನರಾವರ್ತಿತ ದಾಳಿಗೆ ದಿಲ್ಲಿ ಪತ್ರಕರ್ತರ ಒಕ್ಕೂಟ ಖಂಡನೆ

Update: 2021-04-06 15:00 GMT

ಹೊಸದಿಲ್ಲಿ, ಎ. 6: ವಿವಿಧ ರಾಜ್ಯಗಳಲ್ಲಿ ಪತ್ರಕರ್ತರ ಮೇಲಿನ ಪುನರಾವರ್ತಿತ ದಾಳಿಯನ್ನು ದಿಲ್ಲಿ ಪತ್ರಕರ್ತರ ಒಕ್ಕೂಟ (ಡಿಯುಜೆ) ಖಂಡಿಸಿದೆ ಹಾಗೂ ಕಾಶ್ಮೀರಿ ಛಾಯಾಚಿತ್ರ ಪ್ರತ್ರಕರ್ತ ಖಿಸರ್ ಮಿರ್ ಮೇಲೆ ಇತ್ತೀಚೆಗೆ ಭದ್ರತಾ ಪಡೆಗಳು ದಾಳಿ ನಡೆಸಿದ ಬಗ್ಗೆ ಗಮನ ಸೆಳೆದಿದೆ. ಎಪ್ರಿಲ್ 5ರಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ದಿಲ್ಲಿ ಪತ್ರಕರ್ತರ ಒಕ್ಕೂಟ, ‘‘ಸರಳವಾಗಿ ತಮ್ಮ ಕೆಲಸ ಮಾಡುವ ಮಾಧ್ಯಮ ವ್ಯಕ್ತಿಗಳ ಮೇಲೆ ಹೆಚ್ಚುತ್ತಿರುವ ವೈರತ್ವದ ಬಗ್ಗೆ ನಾವು ತೀವ್ರವಾಗಿ ವಿಷಾದಿಸುತ್ತೇವೆ’’ ಎಂದಿದೆ.

ಮಿರ್ ಅವರ ಮೇಲೆ ನಡೆದ ಹಲ್ಲೆಯನ್ನು ಉಲ್ಲೇಖಿಸಿದ ಡಿಯುಜೆ, 2021 ಎಪ್ರಿಲ್ 2ರಂದು ಪುಲ್ವಾಮಾ ಸಮೀಪ ಇತರ ಪತ್ರಕರ್ತರೊಂದಿಗೆ ಗುಂಡಿನ ಚಕಮಕಿಯನ್ನು ಸೆರೆ ಹಿಡಿಯುತ್ತಿರುವ ಸಂದರ್ಭ ಪೊಲೀಸ್ ಕಾನ್ಸ್‌ಟೆಬಲ್ ಹಿಂದಿನಿಂದ ಒದ್ದಿದ್ದರು. ಇನ್ನೋರ್ವ ಪೊಲೀಸ್ ಪ್ಯಾಲೆಟ್ ಗನ್ ಅನ್ನು ಅವರಿಗೆ ಗುರಿಯಾಗಿ ಹಿಡಿದಿದ್ದರು.

ಈ ಘಟನೆಯ ದೃಶ್ಯವನ್ನು ಇನ್ನೋರ್ವ ಪತ್ರಕರ್ತ ಸೆರೆ ಹಿಡಿದಿದ್ದ. ಈ ಪ್ರದೇಶದಲ್ಲಿ ಸೇನಾ ಪಡೆ ಹಾಗೂ ನಾಗರಿಕರ ನಡುವೆ ನಡೆದ ಘರ್ಷಣೆಯಲ್ಲಿ ಹಲವು ನಾಗರಿಕರು ಗಾಯಗೊಂಡಿದ್ದರು. ಈ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತರಾಗಿದ್ದರು ಎಂದು ಡಿಯುಜೆ ಹೇಳಿಕೆ ತಿಳಿಸಿದೆ. ಹಲವು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದು, ರಾಜಕಾರಣಿಗಳು ಪತ್ರಕರ್ತರನ್ನು ಗುರಿಯಾಗಿರಿಸಿ ದಾಳಿ ನಡೆಸುತ್ತಿದ್ದಾರೆ. ಕೋಲ್ಕೊತ್ತಾದಲ್ಲಿ ಮಾರ್ಚ್ 28ರಂದು ಚುನಾವಣಾ ಪ್ರಚಾರದ ಸಂದರ್ಭ ಪಕ್ಷದ ಕಾರ್ಯಕರ್ತನ ಕೆನ್ನೆಗೆ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಹೊಡೆದಿರುವುದನ್ನು ದಾಖಲಿಸಿದ ಖಾಸಗಿ ಸುದ್ದಿ ವಾಹಿನಿಯ ಪತ್ರಕರ್ತ ಬಿಪಿನ್ ಚೌಬೆ ಅವರ ಮೊಬೈಲ್ ಅನ್ನು ಸುಪ್ರಿಯೋ ಕಿತ್ತುಕೊಂಡಿರುವುದನ್ನು ಡಿಯುಜೆ ಹೇಳಿಕೆ ನೆನಪಿಸಿದೆ. ಉತ್ತರಪ್ರದೇಶದಲ್ಲಿ ಎಎನ್‌ಐ ಕೆಮರಾಮ್ಯಾನ್ ವಿರುದ್ಧ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವಹೇಳನಾಕಾರಿ ಭಾಷೆ ಬಳಸಿದ್ದಾರೆ. ಈ ವೀಡಿಯೊ ಸಾಮಾಜಿಕ ಮಾದ್ಯಮದಲ್ಲಿ ಶೇರ್ ಆಗುತ್ತಿದೆ. ತ್ರಿಪುರಾದ ಪತ್ರಕರ್ತನ ಮೇಲೆ ನಡೆದ ದಾಳಿಯ ಬಗ್ಗೆ ಗಮನ ಸೆಳೆದ ಡಿಯುಜೆ, ಕಳೆದ 6 ತಿಂಗಳಲ್ಲಿ 23 ಪತ್ರಕರ್ತರ ಮೇಲೆ ದಾಳಿ ನಡೆದಿದೆ ಎಂದಿದೆ. 2020ರಲ್ಲಿ ದಲಿತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ನಡೆಸಿದ ಪ್ರಕರಣದ ವರದಿ ಮಾಡಲು ಉತ್ತರಪ್ರದೇಶದ ಹಾಥರಸ್‌ಗೆ ತೆರಳುತ್ತಿದ್ದಾಗ ಬಂಧಿತ ಕೇರಳದ ಪತ್ರಕರ್ತ ಸಿದ್ದೀಕ್ ಕಪ್ಪನ್ ಹಾಗೂ ಇತರ ಹಲವು ಪತ್ರಕರ್ತರ ವಿರುದ್ಧದ 5,000 ಪುಟಗಳ ಆರೋಪ ಪಟ್ಟಿಯನ್ನು ಅದು ನೆನಪಿಸಿದೆ. ಹಾಥರಸ್‌ನಲ್ಲಿ ಗಲಭೆಗೆ ಉತ್ತೇಜಿಸಲು ಯೋಜಿಸಿದ್ದರು ಎಂದು ಆರೋಪಿಸಿ ಕಪ್ಪನ್ ಹಾಗೂ ಇತರ ಪತ್ರಕರ್ತರ ವಿರುದ್ದ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು ಎಂದು ಅದು ಹೇಳಿದೆ.

ಪತ್ರಕರ್ತರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿರುವ ಡಿಯುಜೆ, ಪತ್ರಕರ್ತರ ವಿರುದ್ಧ ಅನಗತ್ಯ ಪ್ರಕರಣ ದಾಖಲಿಸುವುದು ಹಾಗೂ ಅನಂತರ ಅವರನ್ನು ಬಲಿಪಶು ಮಾಡುವುದಕ್ಕೆ ಅಂತ್ಯ ಹಾಡುವಂತೆ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News