×
Ad

ಸಿಬಿಐ ತನಿಖೆಯ ರದ್ದತಿ ಕೋರಿ ಸುಪ್ರೀಂ ಕೋರ್ಟಿಗೆ ಮಹಾರಾಷ್ಟ್ರ ಸರಕಾರ,ಅನಿಲ್ ದೇಶಮುಖ್ ಮೊರೆ

Update: 2021-04-06 21:42 IST

ಹೊಸದಿಲ್ಲಿ,ಎ.6: ಬಾಂಬೆ ಉಚ್ಚ ನ್ಯಾಯಾಲಯವು ಮಾಜಿ ಮುಂಬೈ ಪೊಲೀಸ್ ಆಯುಕ್ತ ಪರಮಬೀರ್ ಸಿಂಗ್ ಅವರು ಮಹಾರಾಷ್ಟ್ರದ ಮಾಜಿ ಗೃಹಸಚಿವ ಅನಿಲ್ ದೇಶಮುಖ್ ವಿರುದ್ಧ ಮಾಡಿರುವ ಭ್ರಷ್ಟಾಚಾರ ಆರೋಪದ ಕುರಿತು ಸಿಬಿಐನಿಂದ ಪ್ರಾಥಮಿಕ ತನಿಖೆಗೆ ಸೋಮವಾರ ಆದೇಶಿಸಿರುವ ಬೆನ್ನಲ್ಲೇ ಅದನ್ನು ರದ್ದುಗೊಳಿಸುವಂತೆ ಕೋರಿ ಮಹಾರಾಷ್ಟ್ರ ಸರಕಾರ ಮತ್ತು ದೇಶಮುಖ ಮಂಗಳವಾರ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದಾರೆ.

ದೇಶಮುಖ್ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಸಿಂಗ್ ಮಾ.25ರಂದು ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಕೋರಿಕೊಂಡಿದ್ದರು. ಬಾರ್‌ಗಳು ಮತ್ತು ರೆಸ್ಟೋರಂಟ್‌ಗಳಿಂದ ಪ್ರತಿ ತಿಂಗಳು 100 ಕೋ.ರೂ.ಹಫ್ತಾ ಸಂಗ್ರಹಿಸುವಂತೆ ದೇಶಮುಖ ಅಮಾನತುಗೊಂಡಿರುವ ಎಪಿಐ ಸಚಿನ್ ವಝೆ ಸೇರಿದಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು ಸಿಂಗ್ ಆರೋಪಿಸಿದ್ದಾರೆ. ಪೊಲೀಸ್ ವರ್ಗಾವಣೆಗಳು ಮತ್ತು ನಿಯೋಜನೆಗಳಲ್ಲಿಯೂ ದೇಶಮುಖ ಭ್ರಷ್ಟಾಚಾರವನ್ನು ನಡೆಸುತ್ತಿದ್ದರು ಎಂದೂ ಅವರು ಆಪಾದಿಸಿದ್ದಾರೆ. ಕೈಗಾರಿಕೋದ್ಯಮಿ ಮುಕೇಶ ಅಂಬಾನಿ ಅವರ ಇಲ್ಲಿಯ ನಿವಾಸದ ಬಳಿ ಸ್ಫೋಟಕ ತುಂಬಿದ್ದ ವಾಹನ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಝೆ ಈಗಾಗಲೇ ಬಂಧನದಲ್ಲಿದ್ದಾರೆ.

ಬಾಂಬೆ ಉಚ್ಚ ನ್ಯಾಯಾಲಯವು ಸೋಮವಾರ ಸಿಬಿಐನಿಂದ ಪ್ರಾಥಮಿಕ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ದೇಶಮುಖ ನೈತಿಕ ಕಾರಣಗಳನ್ನು ನೀಡಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ದೇಶಮುಖ್ ಮತ್ತು ಅವರ ಪಕ್ಷ ಎನ್‌ಸಿಪಿ ಸಿಂಗ್ ಮಾಡಿರುವ ಆರೋಪಗಳನ್ನು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News