ಉಡುಪಿ ಜಿಲ್ಲಾ ಪಂಚಾಯತ್ ಕೊನೆಯ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಸದಸ್ಯರು ಆಕ್ರೋಶ

Update: 2021-04-06 16:17 GMT

 ಉಡುಪಿ, ಎ.6: ದಿನಕರ ಬಾಬು ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್‌ನ 24ನೇ ಹಾಗೂ ಕೊನೆಯ ಸಾಮಾನ್ಯ ಸಭೆ ಸೋಮವಾರ ಮಣಿಪಾಲದ ಜಿಪಂ ಸಭಾಂಗಣದಲ್ಲಿ ನಡೆದಿದ್ದು, ತಮ್ಮ ಐದು ವರ್ಷಗಳ ಅವಧಿಯ ಅಂತಿಮ ಸಭೆಯಾದ ಕಾರಣ ಸದಸ್ಯರು ಜಿಲ್ಲೆಯ ಅಧಿಕಾರಿಗಳ ಕಾರ್ಯವೈಖರಿಗೆ ಗರಂ ಆಗಿದ್ದು, ಅಲ್ಲಲ್ಲಿ ಚೆನ್ನಾಗಿ ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್ ಸದಸ್ಯ ಜನಾರ್ದನ ತೋನ್ಸೆ ಅವರು ಮತ್ತೊಮ್ಮೆ ಕೊಕ್ಕರ್ಣೆ ಕೋಟಂಬೈಲಿನಲ್ಲಿ ವಾರಾಹಿ ನೀರಾವರಿ ನಿಗಮದಿಂದ ಎರಡು ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿದ ರಸ್ತೆ ಕಾಮಗಾರಿಯ ವಿಷಯವನ್ನು ಮತ್ತೊಮ್ಮೆ ಸಭೆಯಲ್ಲಿ ಪ್ರಸ್ತಾಪಿಸಿ, ಕಳಪೆ ಕಾಮಗಾರಿ ನಡೆದಿರುವುದು ಸಾಬೀತಾ ದರೂ ಯಾಕೆ ಗುತ್ತಿಗೆದಾರರು ಹಾಗೂ ಅಧ್ಯಕ್ಷರ ಆದೇಶದ ಹೊರತಾಗಿಯೂ ಬಿಲ್ ಪಾವತಿಸಿದ ಇಂಜಿನಿಯರ್ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ಭರಿತರಾಗಿ ವಾದಿಸಿದರು.

ಹೆಚ್ಚುಕಡಿಮೆ ಅವಧಿಯುದ್ದಕ್ಕೂ ಪ್ರಸ್ತಾಪವಾದ ಈ ಕಳಪೆ ಕಾಮಗಾರಿ ವಿಷಯದಲ್ಲಿ ಜಿಪಂ ಅಧ್ಯಕ್ಷರ ಆದೇಶಕ್ಕೆ ಯಾವುದೇ ಗೌರವ ಇಲ್ಲದಂತೆ ಮಾಡಲಾಗಿದೆ. ಜಿಪಂ ಸತತವಾಗಿ ತೆಗೆದುಕೊಂಡ ನಿರ್ಣಯಕ್ಕೆ ಬೆಲೆಯೇ ಇಲ್ಲದಂತೆ ಮಾಡಲಾಗಿದೆ. ಸತತವಾಗಿ ಒತ್ತಾಯಿಸಿದರೂ ಕೆಲಸ ನಿರ್ವಹಿಸಿದ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿಲ್ಲ ಎಂದು ಜನಾರ್ದನ ತೋನ್ಸೆ ತನ್ನ ಅಸಮಧಾನ ವ್ಯಕ್ತಪಡಿಸಿದರು. ಅವರಿಗೆ ಉದಯ ಕೋಟ್ಯಾನ್ ಹಾಗೂ ಬಾಬು ಶೆಟ್ಟಿ ಅವರು ಬೆಂಬಲ ವ್ಯಕ್ತಪಡಿಸಿದರು.

ಸದಸ್ಯರ ಆಕ್ರೋಶಗಳಿಗೆ ಉತ್ತರಿಸಿದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ. ಸರಕಾರಕ್ಕೆ ಈಗಾಗಲೇ ತನಿಖಾ ವರದಿಯನ್ನು ಸಲ್ಲಿಸಲಾಗಿದೆ. ಸರಕಾರದಿಂದ ಅನುಮತಿ ದೊರೆತ ಬಳಿಕ ಸಂಬಂಧಿಸಿದ ಗುತ್ತಿಗೆದಾರರರನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ತನ್ನ ಕ್ಷೇತ್ರದ ಕಲ್ಯಾಣಪುರ, ಕೆಮ್ಮಣ್ಣುವಿನ ನೆರೆ ಸಂತ್ರಸ್ಥರಿಗೆ ಇನ್ನೂ ತಾತ್ಕಾಲಿಕವಾಗಿ ಸಿಗುವ 10,000ರೂ.ಗಳ ನೆರೆ ಪರಿಹಾರ ಸಿಕ್ಕಿಲ್ಲ. ಜನರಿಗೆ ಉತ್ತರಿಸಿ ಸಾಕಾಗಿದೆ ಎಂದು ಜನಾರ್ದನ ತೋನ್ಸೆ ದೂರಿದರು. ಪರಿಹಾರಕ್ಕೆ ಸಲ್ಲಿಸಿದ 2049 ಅರ್ಜಿಗಳಲ್ಲಿ 38ಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಇದಕ್ಕೆ ಲಾಗಿನ್ ಸಮಸ್ಯೆಯೇ ಕಾರಣ ಎಂದು ಉಡುಪಿ ತಹಶೀಲ್ದಾರ್ ಸಮಜಾಯಿಷಿ ನೀಡಿದರು.

ಸಂಬಂದಪಟ್ಟ ಗ್ರಾಮಕ್ಕೆ ಬ್ಯಾಂಕ್ ಅಧಿಕಾರಿಗಳ ಜೊತೆಗೆ ತೆರಳಿ ಒಂದು ದಿನ ಅಲ್ಲೇ ಅದಾಲತ್‌ನ್ನು ನಡೆಸುವಂತೆ ಸಿಇಓ ಸಲಹೆ ನೀಡಿದರು. ತಮಗೆ ಬೇಕಾದ ಎಲ್ಲಾ ದಾಖಲೆಗಳನ್ನು ಪಡೆದು ಸಮಸ್ಯೆಯನ್ನು ಒಂದೇ ದಿನದಲ್ಲಿ ಬಗೆಹರಿಸುವಂತೆ ಡಾ.ಭಟ್, ತಹಶೀಲ್ದಾರ್ ಸೂಚಿಸಿದರು.

ಮಾಂಸ ತ್ಯಾಜ್ಯ ನಿರ್ವಹಣೆ: ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯ ನಡೆಸುವಾಗ, ನದಿ ತೀರದಲ್ಲಿ ಕೋಳಿ ಮಾಂಸದ ತ್ಯಾಜ್ಯ, ಪ್ಯಾಡ್ ಹಾಗೂ ಪ್ಯಾಂಪರ್ಸ್‌ಗಳ ತ್ಯಾಜ್ಯವನ್ನು ಸುರಿಯುತಿದ್ದು, ಇವಗಳ ನಿರ್ವಹಣೆ ತೀರಾ ಸಮಸ್ಯೆಯಾಗಿದೆ. ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳ ಬೇಕು ಎಂದು ಸದಸ್ಯೆ ದಿವ್ಯಶ್ರೀ ಅಮೀನ್ ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, 155 ಗ್ರಾಪಂಗಳಲ್ಲಿ 141ಗ್ರಾಪಂಗಳಲ್ಲಿ ಈಗಾಗಲೇ ಮನೆ ಮನೆ ಕಸ ಸಂಗ್ರಹ ಪ್ರಾರಂಭವಾಗಿದ್ದು, ಕಸ ಸಂಗ್ರಹ ವಾಹನ ಹಾಗೂ ಶೆಡ್ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತಿದೆ. ಕೋಳಿ ಮಾಂಸ ತ್ಯಾಜ್ಯದ ನಿರ್ವಹಣೆಗೆ ಪಿಡಿಓಗಳಿಗೆ ತರಬೇತಿ ನೀಡಲಾಗಿದೆ. ಪ್ಯಾಡ್‌ನ ವಿಲೇವಾರಿಗೆ ಗ್ರಾಪಂಗಳಿಗೆ ಇನ್ಸುಲೇಟರ್‌ಗಳ ಖರೀದಿಗೆ ಅನುದಾನ ನೀಡಲಾಗುತ್ತಿದೆ ಎಂದರು.

ಗೆಣ್ಸು ಬೇಸೋಕೆ ಬಂದದ್ದಾ?: ಸಿದ್ಧಾಪುರದಲ್ಲಿ 2017-18ನೇ ಸಾಲಿನಲ್ಲಿ ಕೊರಗರ ಕಾಲನಿಯಲ್ಲಿ ತೆರೆದ ಬಾವಿ ನಿರ್ಮಿಸಿದ ಗುತ್ತಿಗೆದಾರರಿಗೆ ಇನ್ನೂ ಹಣ ಪಾವತಿಯಾಗದಿರುವ ಬಗ್ಗೆ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ ಪ್ರಶ್ನಿಸಿದರು. ಬಾವಿ ನಿರ್ಮಾಣದಲ್ಲಿ ಯಾವುದೇ ದೂರುಗಳಿಲ್ಲ. ಕೆಆರ್‌ಡಿಎಲ್ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಇದನ್ನು ತಡೆ ಹಿಡಿದ್ದಾರೆ ಎಂದು ಆಕ್ರೋಶಭರಿತರಾಗಿ ನುಡಿದರು.

ಅಧಿಕಾರಿಗಳು ನನ್ನ ಉಪಸ್ಥಿತಿಯಲ್ಲೇ ಬಾವಿಯ ಕಾಮಗಾರಿಯನ್ನು ಪರಿಶೀಲಿಸಿದ್ದಾರೆ. ಜಿಲ್ಲಾಧಿಕಾರಿಗಳೂ ಹಣ ಬಿಡುಗಡೆ ಮಾಡುವಂತೆ ತಿಳಿಸಿದ್ದಾರೆ. ಆದರೂ ಇನ್ನೂ ಹಣ ಪಾವತಿಯಾಗಿಲ್ಲ. ಹಾಗಿದ್ದರೆ ಅಧಿಕಾರಿಗಳು ಯಾಕೆ ಗೆಣ್ಸು ಬೇಸೋಕೆ ಬಂದದ್ದಾ ಎಂದು ರೋಹಿತ್ ಶೆಟ್ಟಿ ಸಿಟ್ಟಿನಿಂದ ನುಡಿದರು. ಸದಸ್ಯರ ಈ ಮಾತಿಗೆ ಸಿಇಓ ಲಘುವಾಗಿ ಆಕ್ಷೇಪ ಸೂಚಿಸಿದರು. ಜಿಲ್ಲಾಧಿಕಾರಿಗಳ ಪರಿಶೀಲನೆ ಬಳಿಕ ಗುತ್ತಿಗೆದಾರರಿಗೆ ಹಣ ಪಾವತಿಗೆ ಕ್ರಮಕೈಗೊಳ್ಳುವುದಾಗಿ ಸಿಇಓ ಭರವಸೆ ನೀಡಿದರು.

ಕಾಡುಪ್ರಾಣಿಗಳ ಹಾವಳಿ ಬಗ್ಗೆ ಮತ್ತೆ ಸಭೆಯಲ್ಲಿ ಚರ್ಚೆ ನಡೆಯಿತು. ಈ ಬಾರಿ ಮಂಗಗಳೇ ಚರ್ಚೆಯ ಕೇಂದ್ರಬಿಂದುವಾಗಿತ್ತು. ಹಾವಂಜೆ ಆಸುಪಾಸಿನಲ್ಲಿ ಮಂಗಗಳ ಹಾವಳಿ ವಿಪರೀತವಾಗಿದೆ. ಅವುಗಳಿಂದ ಕೃಷಿಗೆ ತೊಂದರೆಯಾಗಿದ್ದು, ಈಗೀಗ ಮನೆಗಳಿಗೂ ನುಗ್ಗಿ ಬೆದರಿಸುತ್ತಿವೆ ಎಂದರು. ಅವುಗಳನ್ನು ಹಿಡಿದು ಆಗುಂಬೆಗೆ ಬಿಡಿ ಎಂದರು. ಇದಕ್ಕೆ ಹೆಬ್ರಿ ಪರಿಸರದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಶೀಶ್ ರೆಡ್ಡಿ ಅವರು ಉತ್ತರಿಸಿ, ಈಗಾಗಲೇ ಅರಣ್ಯ ಬೆಳೆಸಲು 346 ಹೆಕ್ಟೇರ್ ಪ್ರದೇಶವನ್ನು ಗುರುತಿಸಲಾಗಿದ್ದು, ಇವುಗಳಲ್ಲಿ 276 ಹೆಕ್ಟೇರ್‌ನಲ್ಲಿ ಸ್ವಾಭಾವಿಕ ಅರಣ್ಯ ಬೆಳೆಸಲಾಗುತ್ತಿದೆ. ಇಲ್ಲಿ ಊರಿನ ಎಲ್ಲಾ ಹಣ್ಣು ಹಂಪಲುಗಳ ಗಿಡ-ಮರಗಳಿರುತ್ತವೆ. ಇದರಿಂದ ಕಾಡುಪ್ರಾಣಿಗಳಿಗೂ ಆಹಾರ ದೊರೆಯಲಿದೆ ಎಂದರು.

ಕಾಡುಗಳ ವಿಸ್ತೀರ್ಣ ಕ್ಷೀಣಿಸಿದರೂ, ಕಳೆದ ಐದು ವರ್ಷಗಳಲ್ಲಿ ಚಿರತೆಗಳ ಸಂತತಿ ಶೇ.60ರಷ್ಟು ಹೆಚ್ಚಾಗಿದೆ. ಉಳಿದ ಪ್ರಾಣಿಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ. ಕೃಷಿ ಹಾನಿಗೆ ಪರಿಹಾರ ನೀಡುತ್ತೇವೆ. ಹಾವಂಜೆಯ ಮಂಗಗಳ ಸಮಸ್ಯೆ ಬಗ್ಗೆ ಗಮನ ಹರಿಸುತ್ತೇವೆ ಎಂದು ರೆಡ್ಡಿ ಭರವಸೆ ನೀಡಿದರು.

ಕುಡಿಯುವ ನೀರಿನ ಸಮಸ್ಯೆ, ಸುಜ್ಞಾನ ಕಂಪೆನಿಗೆ ನೀಡಿದ ಜಾಗದ ಅಕ್ರಮ ಪರಭಾರೆ, ಲೈಸನ್ಸ್ ಪಡೆದ ಭೂಮಾಪಕರ ಮುಷ್ಕರದಿಂದ ಸರ್ವೆ ಕಾರ್ಯ ಸ್ಥಗಿತಗೊಂಡಿದ್ದು ಜನರು ತೀವ್ರ ತೊಂದರೆ ಅನುಭವಿಸುತಿದ್ದಾರೆ ಎಂಬ ವಿಷಯವನ್ನು ಸದಸ್ಯರು ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಉಪಕಾರ್ಯದರ್ಶಿ ಕಿರಣ್ ಪಡ್ನೇಕರ್, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಪ್ರತಾಪ್ ‌ಹೆಗ್ಡೆ ಮಾರಾಳಿ, ಶೋಭಾ ಜಿ.ಪುತ್ರನ್, ಸುಮಿತ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News