ಸರಕಾರಿ ಬಸ್ ಮುಷ್ಕರ ಹಿನ್ನೆಲೆ : ಖಾಸಗಿ ಬಸ್‌ಗಳಿಗೆ ತಾತ್ಕಾಲಿಕ ಪರ್ಮಿಟ್ ನೀಡಲು ನಿರ್ಧಾರ

Update: 2021-04-06 16:54 GMT

ಮಂಗಳೂರು, ಎ.6: ಕರ್ನಾಟಕ ರಸ್ತೆ ಸಾರಿಗೆ ನೌಕರರ ಸಂಘವು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎ.7ರಿಂದ ರಾಜ್ಯಾದ್ಯಂತ ಮುಷ್ಕರ ನಡೆಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ನಗರದ ಆರ್‌ಟಿಒ ಕಚೇರಿಯಲ್ಲಿ ಮಂಗಳವಾರ ಖಾಸಗಿ ಬಸ್ ಮಾಲಕರ ತುರ್ತು ಸಭೆ ಕರೆದ ಅಧಿಕಾರಿಗಳು ಖಾಸಗಿ ಬಸ್‌ಗಳಿಗೆ ತಾತ್ಕಾಲಿಕ ಪರ್ಮಿಟ್ ನೀಡಲು ನಿರ್ಧರಿಸಿದ್ದಾರೆ.

ಕೆಎಸ್ಸಾರ್ಟಿಸಿ ಬಸ್‌ಗಳು ಸಾಗುವ ಎಲ್ಲಾ ರೂಟ್‌ನಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಖಾಸಗಿ ಬಸ್ಸುಗಳಿಗೆ ತಾತ್ಕಾಲಿಕ ಪರ್ಮಿಟ್ ನೀಡಲು ತೀರ್ಮಾನಿಸಲಾಗಿದೆ. ಇದಕ್ಕೆ ಬಸ್ ಮಾಲಕರು ಕೂಡಾ ಸೂಕ್ತವಾಗಿ ಸ್ಪಂದಿಸಿದ್ದಾರೆಂದು ತಿಳಿದು ಬಂದಿದೆ.

ಸರಕಾರಿ ಬಸ್ ಮುಷ್ಕರದಿಂದ ನಗರದಲ್ಲಿ ಸಮಸ್ಯೆಯಾಗದು. ಆದರೆ, ಗ್ರಾಮಾಂತರ ಪ್ರದೇಶದ ಜನರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಗ್ರಾಮೀಣ ಭಾಗದ ರೂಟ್‌ನಲ್ಲಿ ಖಾಸಗಿ ಬಸ್ ಓಡಾಡಲು ತಾತ್ಕಾಲಿಕ ಪರ್ಮಿಟ್ ನೀಡಲು ಜಿಲ್ಲಾಡಳಿತ ಮುಂದಾಗಿದೆ. ಮುಖ್ಯವಾಗಿ ಮಂಗಳೂರು -ಧರ್ಮಸ್ಥಳ, ಮಂಗಳೂರು- ಸುಬ್ರಹ್ಮಣ್ಯ ರೂಟ್‌ನಲ್ಲಿ ಸರಕಾರಿ ಬಸ್ ಓಡಾಟ ನಿಲ್ಲಿಸಿದರೆ ಅಲ್ಲಿಗೆ ಖಾಸಗಿ ಬಸ್‌ಗಳು ತಾತ್ಕಾಲಿಕ ಪರ್ಮಿಟ್‌ನಲ್ಲಿ ಓಡಾಟ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ 20 ಬಸ್‌ಗಳು ಓಡಾಟಕ್ಕೆ ಸಜ್ಜಾಗಿವೆ.

ಜಿಲ್ಲೆಯ ಪುತ್ತೂರು, ಉಪ್ಪಿನಂಗಡಿ, ವಿಟ್ಲ ರೂಟ್‌ನಲ್ಲಿ ಈಗಾಗಲೇ ಖಾಸಗಿಯ 65 ಬಸ್‌ಗಳು ಸಂಚರಿಸುತ್ತಿವೆ. ಸರಕಾರಿ ಬಸ್‌ಗಳು ಪ್ರಾಬಲ್ಯ ವಿರುವ ಈ ರೂಟ್‌ಗಳಲ್ಲಿ ಸಮಸ್ಯೆಯಾದರೆ ಮತ್ತಷ್ಟು ಖಾಸಗಿ ಬಸ್‌ಗಳು ಸಂಚರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.

ಮಂಗಳೂರಿನಿಂದ ಬೆಂಗಳೂರು, ಹುಬ್ಬಳ್ಳಿ, ಮೈಸೂರಿಗೆ ತೆರಳುವ ಸರಕಾರಿ ಬಸ್‌ಗಳಲ್ಲಿ ವ್ಯತ್ಯಯ ಉಂಟಾದರೆ ಅಲ್ಲಿಗೆ ಖಾಸಗಿ ಬಸ್‌ಗಳು ಓಡಾಡಲಿದೆ. ಪ್ರಯಾಣಿಕರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗುತ್ತದೆ ಎಂದು ಖಾಸಗಿ ಬಸ್ ಮಾಲಕರು ಆರ್‌ಟಿಒಗೆ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸಭೆಯಲ್ಲಿ ಆರ್‌ಟಿಒ ಆರ್.ಎಂ. ವರ್ಣೆಕರ್, ದ.ಕ. ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ, ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜಾರಾಮ್ ಬಳ್ಳಾಲ್, ಕಾಂಟ್ರೆಕ್ಟ್ ಕ್ಯಾರೇಜ್ ಬಸ್ ಮಾಲಕರ ಸಂಘದ ಅಧ್ಯಕ್ಷ ಜಯರಾಮ ಶೇಖ ಮತ್ತಿತರರು ಉಪಸ್ಥಿತರಿದ್ದರು.

ಎ.7ರಂದು ಡಿಸಿ ಸಭೆ: ಕೆಎಸ್ಸಾರ್ಟಿಸಿ ಬಸ್ ಬಂದ್ ವಿಚಾರದಲ್ಲಿ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಎ.7ರಂದು ಡಿಸಿ ನೇತೃತ್ವದಲ್ಲಿ ಮಹತ್ವ ಸಭೆ ಆಯೋಜಿಸಲಾಗಿದೆ. ಇದರಲ್ಲಿ ಕೆಎಸ್‌ಆರ್‌ಟಿಸಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News