ಕೋವಿಡ್ ಲಸಿಕೆ ಪಡೆಯುವಂತೆ 45 ವರ್ಷ ಮತ್ತು ಹೆಚ್ಚಿನ ಪ್ರಾಯದ ನೌಕರರಿಗೆ ಕೇಂದ್ರದ ಸೂಚನೆ

Update: 2021-04-06 17:55 GMT

ಹೊಸದಿಲ್ಲಿ,ಎ.6: ದೇಶದಲ್ಲಿ ದಿನೇದಿನೇ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳಿಗೆ ಕಡಿವಾಣ ಹಾಕಲು ಕೇಂದ್ರ ಸರಕಾರವು ಲಸಿಕೆಯನ್ನು ಹಾಕಿಸಿಕೊಳ್ಳುವಂತೆ 45 ವರ್ಷ ಮತ್ತು ಹೆಚ್ಚಿನ ಪ್ರಾಯದ ತನ್ನ ನೌಕರರಿಗೆ ಸೂಚಿಸಿದೆ.

ಲಸಿಕೆ ಪಡೆದುಕೊಂಡ ನಂತರವೂ ನೌಕರರು ಎಲ್ಲ ಕೋವಿಡ್-19 ಶಿಷ್ಟಾಚಾರಗಳ ಪಾಲನೆಯನ್ನು ಮುಂದುವರಿಸಬೇಕು ಎಂದೂ ಕೇಂದ್ರವು ಹೇಳಿಕೆಯಲ್ಲಿ ತಿಳಿಸಿದೆ.

ವಿಶ್ವದಲ್ಲಿ ಕೊರೋನವೈರಸ್‌ನಿಂದ ಅತ್ಯಂತ ಪೀಡಿತ ಎರಡನೇ ದೇಶವಾಗಿರುವ ಭಾರತದಲ್ಲಿ ಇದೇ ಮೊದಲ ಬಾರಿಗೆ ಸೋಮವಾರ ದೈನಂದಿನ ಕೋವಿಡ್-19 ಪ್ರಕರಣಗಳ ಸಂಖ್ಯೆ ಒಂದು ಲಕ್ಷವನ್ನು ದಾಟಿದೆ. ಮಂಗಳವಾರ 96,982 ಹೊಸ ಪ್ರಕರಣಗಳು ಮತ್ತು 442 ಸಾವುಗಳು ವರದಿಯಾಗಿವೆ.

ರೂಪಾಂತರಿತ ಕೋವಿಡ್ ವೈರಸ್‌ನಿಂದಾಗಿ ಮತ್ತು ಮಾಸ್ಕ್ ಧಾರಣೆ ಹಾಗೂ ಸುರಕ್ಷಿತ ಅಂತರದಂತಹ ನಿಯಮಗಳನ್ನು ಜನರು ನಿರ್ಲಕ್ಷಿಸುತ್ತಿರುವುದರಿಂದ ದೇಶವು ಸೋಂಕಿನ ಎರಡನೇ ಅಲೆಯನ್ನು ಎದುರಿಸುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

ದೇಶದಲ್ಲಿ ಅತ್ಯಂತ ಬಾಧಿತ ರಾಜ್ಯವಾಗಿರುವ ಮಹಾರಾಷ್ಟ್ರದಲ್ಲಿ ಪ್ರತಿದಿನವೂ 50,000ಕ್ಕೆ ಹತ್ತಿರ ಹೊಸ ಪ್ರಕರಣಗಳು ದಾಖಲಾಗುತ್ತಿದ್ದು, ಮಂಗಳವಾರ 47,288 ಹೊಸ ಕೊರೋನವೈರಸ್ ಪ್ರಕರಣಗಳು ವರದಿಯಾಗಿವೆ.

ಸರಕಾರದ ಸೂಚನೆಯಂತೆ ಈ ತಿಂಗಳು 45 ವರ್ಷ ಮೇಲ್ಪಟ್ಟ ಅರ್ಹ ಎಲ್ಲರಿಗೂ ಲಸಿಕೆ ನೀಡಿಕೆಯನ್ನು ಆರಂಭಿಸಲಾಗಿದೆ. ಎಲ್ಲ ವಯೋಮಾನದವರಿಗೂ ಲಸಿಕೆ ನೀಡಿಕೆ ಅಭಿಯಾನಕ್ಕಾಗಿ ದಿಲ್ಲಿ ಮತ್ತು ಮಹಾರಾಷ್ಟ್ರ ಕೇಂದ್ರವನ್ನು ಆಗ್ರಹಿಸಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನವೈರಸ್ ಸ್ಥಿತಿ ಮತ್ತು ಲಸಿಕೆ ವಿತರಣೆ ಕುರಿತು ಗುರುವಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News