ದ.ಕ.: ಕರ್ತವ್ಯಕ್ಕೆ ಹಾಜರಾಗದ ಸಾರಿಗೆ ನೌಕರರು: ರಸ್ತೆಗಿಳಿಯದ ಬಸ್ ಗಳು

Update: 2021-04-07 04:49 GMT

ಮಂಗಳೂರು, ಎ.7: ವೇತನ ಪರಿಷ್ಕರಣೆ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್ಸಾರ್ಟಿಸಿ ನೌಕರರು ಇಂದಿನಿಂದ ಆರಂಭಿಸಿರುವ ಮುಷ್ಕರಕ್ಕೆ ದ.ಕ. ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ನೌಕರರು ಕರ್ತವ್ಯಕ್ಕೆ ಹಾಜರಾಗದ ಕಾರಣ ಬಸ್ ಗಳು ಡಿಪೋದಲ್ಲೇ ಉಳಿದುಕೊಂಡಿವೆ.

ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದ 470ಕ್ಕೂ ಅಧಿಕ ಬಸ್ ಗಳು ಬುಧವಾರ ನಿಲ್ದಾಣದಲ್ಲಿಯೇ ತಂಗಿವೆ. ಈ ನಡುವೆ ಸರಕಾರಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಗಳು ಪ್ರಯಾಣಿಕರನ್ನು ಹತ್ತಿಸಿಕೊಂಡು ಪ್ರಯಾಣ ಬೆಳೆಸುತ್ತಿರುವುದು ಕಂಡುಬರುತ್ತಿದೆ. 

ಬಸ್ ಮುಷ್ಕರದ ಬಗ್ಗೆ ಮಾಹಿತಿ ಇದ್ದ ಕಾರಣದಿಂದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಇಂದು ಪ್ರಯಾಣಿಕರ ಸಂಖ್ಯೆ ವಿರಳವಾಗಿ ಕಂಡುಬರುತ್ತಿದೆ.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಸುಳ್ಯದಲ್ಲಿ ಪ್ರಯಾಣಿಕರ ಪರದಾಟ

ಸುಳ್ಯ ವರದಿ: ಆರನೇ ವೇತನ ಆಯೋಗದ ಶಿಫಾರಸ್ಸಿನ ಅನುಷ್ಠಾನಕ್ಕೆ ಆಗ್ರಹಿಸಿ ಸಾರಿಗೆ ನೌಕರರು ಎ.7ರಿಂದ ಮುಷ್ಕರ ಹೂಡಿದ್ದು, ಅದರಂತೆ ಕೆಎಸ್ಸಾರ್ಟಿಸಿ ಬಸ್ ಗಳ ಸಂಚಾರ ಇಂದು ಬೆಳಗ್ಗೆಯಿಂದಲೇ ಸ್ಥಗಿತಗೊಂಡಿದೆ. ಸುಳ್ಯದಲ್ಲೂ ಸಾರಿಗೆ ನೌಕರರ ಮುಷ್ಕರ ಪರಿಣಾಮ ಬೀರಿದ್ದು, ಯಾವುದೇ ಕೆಎಸ್ಸಾರ್ಟಿಸಿ ಬಸ್ ಗಳು ರಸ್ತೆಗಿಳಿದಿಲ್ಲ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.

ಖಾಸಗಿ ಬಸ್ ಗಳು, ವ್ಯಾನ್ ಗಳು ಪ್ರಯಾಣಿಕರನ್ನು ಕರೆದೊಯ್ಯಲು ಸಿದ್ಧವಾಗಿ ನಿಂತಿವೆ. ಬಸ್ ಸಂಚಾರ ಸ್ಥಗಿತಗೊಂಡ‌ ಕಾರಣ ತಾಲೂಕಿನ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News