ಛತ್ತೀಸ್ ಗಢ ಮಾವೋವಾದಿ ದಾಳಿ ಕುರಿತು ಫೇಸ್ ಬುಕ್ ಪೋಸ್ಟ್ ಮಾಡಿದ ಅಸ್ಸಾಂ ಲೇಖಕಿ ವಿರುದ್ಧ ದೇಶದ್ರೋಹ ಕೇಸ್, ಬಂಧನ

Update: 2021-04-07 08:12 GMT

ಹೊಸದಿಲ್ಲಿ: ಛತ್ತೀಸಗಢದಲ್ಲಿ ಕಳೆದ ಶನಿವಾರ ಮಾವೋವಾದಿಗಳ ದಾಳಿಯಲ್ಲಿ 22 ಜವಾನರು ಮೃತಪಟ್ಟ ಘಟನೆಯ ನಂತರ ಮಾಡಿದ ಫೇಸ್ ಬುಕ್ ಪೋಸ್ಟ್ ಒಂದಕ್ಕಾಗಿ ಗುವಾಹಟಿ ಮೂಲದ ಲೇಖಕಿ ಶಿಖಾ ಶರ್ಮ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಐಪಿಸಿ 124ಎ (ದೇಶದ್ರೋಹ) ಸಹಿತ ವಿವಿಧ ಇತರ ಸೆಕ್ಷನ್‍ ಗಳನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಗುವಾಹಟಿ ಪೊಲೀಸ್ ಆಯುಕ್ತ ಮುನ್ನಾ ಪ್ರಸಾದ್ ಗುಪ್ತಾ ಹೇಳಿದ್ದಾರೆ.

"ಕರ್ತವ್ಯ ನಿರ್ವಹಿಸುವ ವೇಳೆ ಮೃತರಾಗುವ ಸಂಬಳ ಪಡೆಯುವ ಮಂದಿಯನ್ನು ಹುತಾತ್ಮರೆಂದು ಕರೆಯಲಾಗದು. ಅದೇ ತರ್ಕ ಅನ್ವಯಿಸುವುದಾದರೆ,  ವಿದ್ಯುದಾಘಾತದಿಂದ ಸಾವನ್ನಪ್ಪುವ ವಿದ್ಯುತ್ ಇಲಾಖೆಯ ಕೆಲಸಗಾರರನ್ನೂ ಹುತಾತ್ಮರೆಂದು ಪರಿಗಣಿಸಬೇಕು. ಮಾಧ್ಯಮಗಳೇ.. ಜನರನ್ನು ಭಾವಾತ್ಮಕರನ್ನಾಗಿಸಬೇಡಿ" ಎಂದು ಶಿಖಾ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದಿದ್ದರೆನ್ನಲಾಗಿದೆ.

ಇದರ ಬೆನ್ನಲ್ಲೇ ಗುವಾಹಟಿ ಹೈಕೋರ್ಟಿನ ಇಬ್ಬರು ವಕೀಲರಾದ ಉಮಿ ದೇಕ ಬರುವಾ ಹಾಗೂ ಕಂಗ್‍ಕನ ಗೋಸ್ವಾಮಿ ಎಂಬವರು ಆಕೆಯ ವಿರುದ್ದ ದಾಖಲಿಸಿದ ದೂರಿನ ಆಧಾರದಲ್ಲಿ ಎಫ್‍ಐಆರ್ ದಾಖಲಾಗಿತ್ತು.

"ಇದು ನಮ್ಮ ಜವಾನರಿಗೆ ತೋರಿಸಲಾದ ಅಗೌರವ ಹಾಗೂ ಕೀಳು ಅಭಿರುಚಿಯ ಹೇಳಿಕೆಯಾಗಿದೆ. ನಮ್ಮ ಜವಾನರ ಸಾಟಿಯಿಲ್ಲದ ಬಲಿದಾನವನ್ನು ಕೇವಲ ಹಣ ಮಾಡುವ ಪ್ರಕ್ರಿಯೆಗೆ ಇಳಿಸಲಾಗಿದೆಯಲ್ಲದೆ  ದೇಶ ಸೇವೆಯ ಪಾವಿತ್ರ್ಯದ ಮೇಲೆ ನಡೆದ ವಾಗ್ದಾಳಿ" ಎಂದು ದೂರಿನಲ್ಲಿ ಆರೋಪಿಸಲಾಗಿದೆಯಲ್ಲದೆ ಪೋಸ್ಟ್ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೂ ಆಗ್ರಹಿಸಲಾಗಿತ್ತು.

ಶಿಖಾ ಶರ್ಮ ಅವರ ಫೇಸ್ ಬುಕ್ ಪ್ರೊಫೈಲ್ ಪ್ರಕಾರ ಆಕೆ ದಿಬ್ರೂಘರ್ ಆಕಾಶವಾಣಿ ಕಲಾವಿದೆಯಾಗಿದ್ದಾರೆ ಹಾಗೂ ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಆಕೆ ಮಾಡಿದ್ದ ಸರಕಾರ ವಿರೋಧಿ ಪೋಸ್ಟ್ ಗಳಿಗೆ ಅತ್ಯಾಚಾರ ಬೆದರಿಕೆಗಳನ್ನೂ ಎದುರಿಸಿದ್ದರೆಂದು ತಿಳಿದು ಬಂದಿದೆ. ತಮ್ಮ ಫೇಸ್ ಬುಕ್ ಪೋಸ್ಟ್ ಗೆ ಬಂದಿರುವ ಟೀಕೆಗಳ ಕುರಿತು ಬಂಧನಕ್ಕೆ ಮುನ್ನ ಸೋಮವಾರ ರಾತ್ರಿ ಪ್ರತಿಕ್ರಿಯಿಸಿದ್ದ ಶಿಖಾ "ನನ್ನ ಪೋಸ್ಟ್ ಅನ್ನು ತಪ್ಪಾಗಿ ಅರ್ಥೈಸುವುದು ಮಾನಸಿಕ ಕಿರುಕುಳವಲ್ಲವೇ? ನನ್ನ ವಿರುದ್ಧದ ಅಪಪ್ರಚಾರ ಕುರಿತು ಕಾನೂನು ಕ್ರಮ ಕೈಗೊಳ್ಳಲಾಗುವುದೇ? ನನಗೆ ಈ ಹಿಂದೆ ಬಂದ ಕೊಲೆ ಹಾಗೂ ಬೆದರಿಕೆಗಳ ಕುರಿತು ನನ್ನ ಎಫ್‍ಐಆರ್ ಆಧಾರದಲ್ಲಿ ತನಿಖೆಯೇಕೆ ನಡೆದಿಲ್ಲ?" ಎಂದು ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News