ದ್ವಿಚಕ್ರ ವಾಹನದಲ್ಲಿ ʼಇವಿಎಂʼ ಸಾಗಾಟ ಮಾಡುತ್ತಿದ್ದವರನ್ನು ಸೆರೆಹಿಡಿದ ಸಾರ್ವಜನಿಕರು

Update: 2021-04-07 09:03 GMT

ಚೆನ್ನೈ: ಮಂಗಳವಾರ ಸಂಜೆ ಮತದಾನ ಅಂತ್ಯಗೊಂಡ ನಂತರ ಎರಡು ಇವಿಎಂಗಳು ಹಾಗೂ ಒಂದು ವಿವಿಪ್ಯಾಟ್ ಯಂತ್ರವನ್ನು ದ್ವಿಚಕ್ರವಾಹನದಲ್ಲಿ ಸಾಗಿಸುತ್ತಿದ್ದ ಇಬ್ಬರನ್ನು ಚೆನ್ನೈನ ವೆಳಚ್ಚೆರಿ ರಸ್ತೆಯಲ್ಲಿ ಇತರ ವಾಹನ ಸವಾರರು ಹಾಗೂ ದಾರಿಹೋಕರು ಸೆರೆ ಹಿಡಿದಿದ್ದಾರೆ. ಈ ಇಬ್ಬರು ಇವಿಎಂ ಕಳ್ಳತನಗೈದಿರಬಹುದೆಂಬ ಶಂಕೆಯಿಂದ ಅವರನ್ನು ಪೊಲೀಸರಿಗೊಪ್ಪಿಸಲಾಗಿದೆ. ಇಬ್ಬರನ್ನೂ ಸಾರ್ವಜನಿಕರು ಪ್ರಶ್ನಿಸುತ್ತಿರುವ ವೀಡಿಯೋ ವೈರಲ್ ಆಗಿದೆ.

ಆದರೆ ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸತ್ಯಬ್ರತ ಸಾಹೊ, ಇವುಗಳು ಮೀಸಲು ಇವಿಎಂ ಆಗಿದ್ದವು ಎಂದಿದ್ದಾರೆ. ಸಾರ್ವಜನಿಕರು ಸೆರೆ ಹಿಡಿದ ಇಬ್ಬರೂ ಕಾರ್ಪೊರೇಷನ್ ಸಿಬ್ಬಂದಿಯಾಗಿದ್ದು ಚುನಾವಣಾ ಕರ್ತವ್ಯದಲ್ಲಿದ್ದರು ಎಂದರಲ್ಲದೆ ನಿಗದಿತ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಇಬ್ಬರು ಹೊಂದಿದ್ದ ಇವಿಎಂಗಳು ಮೀಸಲು ಇವಿಎಂ ಆಗಿದ್ದವು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರೂ ಹೇಳಿದ್ದಾರೆ.

ಇಬ್ಬರನ್ನೂ ನಂತರ ರಿಟರ್ನಿಂಗ್ ಆಫೀಸರ್ ಎದುರು ಹಾಜರು ಪಡಿಸಲಾಯಿತು. ಈ ವಿದ್ಯಮಾನದ ನಂತರ ಯಾವುದೇ ಅಹಿತಕರ ಘಟನೆಗಳು ನಡೆಯದೇ ಇರಲೆಂದು ವೆಲಚ್ಚೆರಿ-ತಾರಮಣಿ ಹೈರೋಡ್‍ನಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News