ಕೋವಿಡ್‌ ಎರಡನೆ ಅಲೆಯಿಂದಾಗಿ ಆರ್ಥಿಕ ಅಭಿವೃದ್ಧಿ ಪ್ರಮಾಣದ ಚೇತರಿಕೆ ಕುರಿತು ʼಅನಿಶ್ಚಿತತೆʼ ಇದೆ: ರಿಸರ್ವ್‌ ಬ್ಯಾಂಕ್‌

Update: 2021-04-07 18:12 GMT

ಹೊಸದಿಲ್ಲಿ, ಎ.7: ದೇಶದಲ್ಲಿ ಕೊರೋನ ಸೋಂಕಿನ ಎರಡನೇ ಅಲೆ ಆರಂಭವಾಗಿದ್ದು , ಸೋಂಕು ತಡೆಗಟ್ಟಲು ಹೊಸ ನಿರ್ಬಂಧಗಳನ್ನು ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ರೆಪೊ ಮತ್ತು ರಿಸರ್ವ್ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಬುಧವಾರ ಹೇಳಿದೆ.

ಜೊತೆಗೆ, 2022ರ ವಿತ್ತೀಯ ವರ್ಷದಲ್ಲಿ ಆರ್ಥಿಕ ಬೆಳವಣಿಗೆ ದರ (ಜಿಡಿಪಿ) +10.5 ಎಂದು ಅಂದಾಜಿಸಿರುವುದಾಗಿ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ರೆಪೊ ದರ( ಬ್ಯಾಂಕ್‌ಗಳಿಗೆ ರಿಸರ್ವ್ ಬ್ಯಾಂಕ್ ನೀಡುವ ಅಲ್ಪಾವಧಿಯ ಸಾಲದ ಮೇಲಿನ ಬಡ್ಡಿದರ) 4%ದಲ್ಲೇ ಮತ್ತು ರಿವರ್ಸ್ ರೆಪೊ ದರ(ವಾಣಿಜ್ಯ ಬ್ಯಾಂಕ್‌ಗಳಿಂದ ರಿಸರ್ವ್ ಬ್ಯಾಂಕ್ ಪಡೆಯುವ ಸಾಲದ ಮೇಲಿನ ಬಡ್ಡಿದರ) 3.35%ದಲ್ಲೇ ಮುಂದುವರಿಯಲಿದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ. ಆರ್ಥಿಕತೆಯಲ್ಲಿ ನಿರಂತರ ಚೇತರಿಕೆಯ ನಿರೀಕ್ಷೆ ನಿಶ್ಚಿತವಾಗುವವರೆಗೆ ವಿತ್ತೀಯ ನೀತಿ ಅನುಕೂಲಕರವಾಗಿರಬೇಕು ಎಂದು ಆರ್‌ಬಿಐ ಆರ್ಥಿಕ ನೀತಿ ಸಮಿತಿ ಅಭಿಪ್ರಾಯಪಟ್ಟಿದೆ ಮತ್ತು ಬಡ್ಡಿದರ ಯಥಾಸ್ಥಿತಿ ಮುಂದುವರಿಯಬೇಕು ಎಂದು ಸರ್ವಾನುಮತದಿಂದ ಅಭಿಪ್ರಾಯಪಟ್ಟಿದೆ ಎಂದು ದಾಸ್ ಹೇಳಿದ್ದಾರೆ.

ಬಡ್ಡಿದರ ಯಥಾಸ್ಥಿತಿ ಮುಂದುವರಿಯುವ ಹೇಳಿಕೆ ಹೊರಬಿದ್ದಂತೆಯೇ, ಷೇರುಪೇಟೆಯಲ್ಲಿ ಚೇತರಿಕೆ ದಾಖಲಾಯಿತು. ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕ 0.76% ಪ್ರಗತಿ ದಾಖಲಿಸಿ 14,794.40 ಅಂಕಕ್ಕೆ ತಲುಪಿದರೆ, ಬಿಎಸ್‌ಇ ಸೂಚ್ಯಂಕ 0.73% ಪ್ರಗತಿ ದಾಖಲಿಸಿ 49,554.71 ಅಂಕಕ್ಕೆ ತಲುಪಿದೆ.

ಕಳೆದ ಫೆಬ್ರವರಿಯಲ್ಲಿ ಇಂಧನ ದರದಲ್ಲಿ ಹೆಚ್ಚಳದಿಂದಾಗಿ ವಾರ್ಷಿಕ ಚಿಲ್ಲರೆ ಹಣದುಬ್ಬರ ದರ ಮೂರು ತಿಂಗಳಲ್ಲೇ ಅತ್ಯಧಿಕ ಪ್ರಮಾಣವಾದ 5.03%ಕ್ಕೆ ಹೆಚ್ಚಿತ್ತು. ಕೊರೋನ ಸೋಂಕಿನಿಂದ ತಳಮಟ್ಟಕ್ಕೆ ಕುಸಿದಿದ್ದ ಅರ್ಥವ್ಯವಸ್ಥೆಗೆ ಚೇತರಿಕೆ ನೀಡುವ ಉದ್ದೇಶದಿಂದ ಉತ್ಪಾದನಾ ವಲಯಕ್ಕೆ ಸಾಕಷ್ಟು ಪ್ರಮಾಣದ ಸಾಲ ದೊರಕುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News