×
Ad

ಕೋಮು ನೆಲೆಯಲ್ಲಿ ಮತ ಯಾಚನೆ ಆರೋಪ: ಮಮತಾ ಬ್ಯಾನರ್ಜಿಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

Update: 2021-04-07 20:28 IST

ಹೊಸದಿಲ್ಲಿ: ಮೂರನೇ ಹಂತದ ಚುನಾವಣೆಗೆ ಮುನ್ನ ಎಪ್ರಿಲ್ 3 ರಂದು ಹೂಗ್ಲಿ ಜಿಲ್ಲೆಯ ತಾರಕೇಶ್ವರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವಾಗ ‘ಬಹಿರಂಗವಾಗಿ ಕೋಮುನೆಲೆಯಲ್ಲಿ ಮತ ಯಾಚನೆ’ ಮಾಡಿದ್ದಾರೆ ಎಂಬ ಆರೋಪದಲ್ಲಿ  ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಚುನಾವಣಾ ಆಯೋಗ ಬುಧವಾರ ಸಂಜೆ ನೋಟಿಸ್ ನೀಡಿದೆ.

66ರ ವಯಸ್ಸಿನ ಮಮತಾಗೆ ನೋಟಿಸ್ ಸ್ವೀಕರಿಸಿದ 48 ಗಂಟೆಗಳ ಒಳಗೆ ವಿವರಣೆ ನೀಡುವಂತೆ ಚುನಾವಣಾ ಆಯೋಗವು ನಿರ್ದೇಶನ ನೀಡಿದೆ. ಇದರಲ್ಲಿ ವಿಫಲವಾದರೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ನೇತೃತ್ವದ ಬಿಜೆಪಿ ನಿಯೋಗದ ದೂರಿನ ಆಧಾರದ ಮೇಲೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.

"... ನಾನು ನನ್ನ ಅಲ್ಪಸಂಖ್ಯಾತ ಸಹೋದರ, ಸಹೋದರಿಯರನ್ನು ಕೈ ಮುಗಿದು ವಿನಂತಿಸುತ್ತಿದ್ದೇನೆ ... ದೆವ್ವದ ಮಾತನ್ನು ಕೇಳಿ ಅಲ್ಪಸಂಖ್ಯಾತ ಮತಗಳನ್ನು ವಿಭಜಿಸಬೇಡಿ ... ಬಿಜೆಪಿಯಿಂದ ಹಣವನ್ನು ತೆಗೆದುಕೊಂಡವರು ... ಹಲವು ರೀತಿಯ  ಕೋಮು ಹೇಳಿಕೆಗಳನ್ನು ರವಾನಿಸುತ್ತಾರೆ ಹಾಗೂ ಹಿಂದೂಗಳು-ಮುಸ್ಲಿಮರ ನಡುವಿನ ಘರ್ಷಣೆಗೆ ಪ್ರಚೋದಿಸುತ್ತಾರೆ ... ಸಿಪಿಎಂ ಮತ್ತು ಬಿಜೆಪಿ ಪಕ್ಷದವರು  ಅಲ್ಪಸಂಖ್ಯಾತ ಮತಗಳನ್ನು ವಿಭಜಿಸಲು ಬಿಜೆಪಿ ನೀಡಿದ ಹಣದಿಂದ ಸುತ್ತುತ್ತಿದ್ದಾರೆ’’ ಎಂಬ  ಬ್ಯಾನರ್ಜಿ ಅವರ ಭಾಷಣವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News