ಡಾಲರ್‌ನೆದುರು ನಾಲ್ಕು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ

Update: 2021-04-07 15:06 GMT

ಹೊಸದಿಲ್ಲಿ, ಎ.7: ಬುಧವಾರ ಅಪರಾಹ್ನ ಡಾಲರ್‌ನೆದುರು 100 ಪೈಸೆಗೂ ಅಧಿಕ ಕುಸಿಯುವ ಮೂಲಕ ಭಾರತೀಯ ರೂಪಾಯಿಯು ಕಳೆದ ನಾಲ್ಕು ತಿಂಗಳುಗಳಲ್ಲಿ ಕನಿಷ್ಠ ಮಟ್ಟವನ್ನು ದಾಖಲಿಸಿದೆ. ಸಂಜೆಯ ವೇಳೆಗೆ ಡಾಲರ್‌ನೆದುರು 74.55ರಲ್ಲಿ ವಹಿವಾಟಾಗುತ್ತಿದ್ದ ರೂಪಾಯಿ ಒಂದೇ ದಿನದಲ್ಲಿ ಸುಮಾರು 113 ಪೈಸೆಗಳನ್ನು ಕಳೆದುಕೊಂಡಿದೆ.

ಕೊರೋನವೈರಸ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವ ಕಳವಳಗಳ ನಡುವೆಯೇ ಮಂಗಳವಾರ ತನ್ನ ಆರಂಭಿಕ ಗಳಿಕೆಯನ್ನು ಕಳೆದುಕೊಂಡ ಬಳಿಕ ರೂಪಾಯಿ ಡಾಲರ್‌ನೆದುರು 12 ಪೈಸೆಗಳಷ್ಟು ಕುಸಿದು 73.42ರಲ್ಲಿ ಸ್ಥಿರಗೊಂಡಿತ್ತು. ಬುಧವಾರ ಕರೆನ್ಸಿ ಮಾರುಕಟ್ಟೆಯಲ್ಲಿ ಇನ್ನೂ 13 ಪೈಸೆಗಳ ನಷ್ಟದೊಂದಿಗೆ 73.55ಕ್ಕೆ ಆರಂಭಗೊಂಡಿದ್ದ ರೂಪಾಯಿ ಮಧ್ಯಾಹ್ನದ ಬಳಿಕ ಭಾರೀ ನಷ್ಟವನ್ನು ಅನುಭವಿಸಿತ್ತು ಮತ್ತು ಕಳೆದ ವರ್ಷದ ನ.20ರ ನಂತರದ ತನ್ನ ಕನಿಷ್ಠ ಮಟ್ಟವನ್ನು ದಾಖಲಿಸಿತ್ತು.

ತನ್ಮಧ್ಯೆ ಬುಧವಾರ ಭಾರತೀಯ ಶೇರು ಮಾರುಕಟ್ಟೆಗಳು ಲಾಭದಲ್ಲಿಯೇ ವಹಿವಾಟು ಮುಗಿಸಿವೆ. ಬಿಎಸ್‌ಇ ಸೆನ್ಸೆಕ್ಸ್ 460.37 (ಶೇ.0.94) ಅಂಶಗಳ ಗಳಿಕೆಯೊಂದಿಗೆ 49,661.76ರಲ್ಲಿ ಮತ್ತು ಎನ್‌ಎಸ್‌ಇ ನಿಫ್ಟಿ 135.55 (ಶೇ.0.92) ಅಂಶಗಳ ಗಳಿಕೆಯೊಂದಿಗೆ 14,819.05ರಲ್ಲಿ ದಿನದ ವಹಿವಾಟನ್ನು ಅಂತ್ಯಗೊಳಿಸಿವೆ.

ಬುಧವಾರ ತನ್ನ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ ಆರ್‌ಬಿಐ ಬಡ್ಡಿದರಗಳಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News