ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಕುರಿತು ಹೇಳಿಕೆಗಾಗಿ ಉದಯನಿಧಿ ಸ್ಟಾಲಿನ್‌ಗೆ ಚು.ಆಯೋಗದ ನೋಟಿಸ್

Update: 2021-04-07 16:39 GMT

ಹೊಸದಿಲ್ಲಿ, ಎ.7: ಮಾಜಿ ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್ ಮತ್ತು ಅರುಣ ಜೇಟ್ಲಿ ಅವರ ನಿಧನದ ಬಗ್ಗೆ ಇತ್ತೀಚಿನ ವಿವಾದಾತ್ಮಕ ಹೇಳಿಕೆಗಾಗಿ ಡಿಎಂಕೆ ವರಿಷ್ಠ ಎಂ.ಕೆ.ಸ್ಟಾಲಿನ್ ಅವರ ಪುತ್ರ ಹಾಗೂ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್‌ಗೆ ಚುನಾವಣಾ ಆಯೋಗವು ನೋಟಿಸನ್ನು ಹೊರಡಿಸಿದೆ.

ಉದಯನಿಧಿಯವರ ಹೇಳಿಕೆಗಳ ವಿರುದ್ಧ ಬಿಜೆಪಿಯ ದೂರನ್ನು ತಾನು ಎ.2ರಂದು ಸ್ವೀಕರಿಸಿರುವುದಾಗಿ ನೋಟಿಸಿನಲ್ಲಿ ತಿಳಿಸಿರುವ ಆಯೋಗವು, ಅವರ ಭಾಷಣವು ಇತರ ರಾಜಕೀಯ ಪಕ್ಷಗಳ ಟೀಕೆಗಳಿಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಉದಯನಿಧಿ ಕಳೆದ ವಾರ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ತಮ್ಮ ಮೇಲೆ ಹೇರಿದ್ದ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದೆ ಸ್ವರಾಜ್ ಮತ್ತು ಜೇಟ್ಲಿ ಸಾವಿಗೀಡಾಗಿದ್ದರು ಎಂದು ಹೇಳಿದ್ದರು. ಡಿಎಂಕೆ ಯುವರಾಜನ ರಾಜಕೀಯ ಪ್ರವೇಶಕ್ಕಾಗಿ ಪಕ್ಷದ ಹಿರಿಯ ನಾಯಕರನ್ನು ಬಲಿ ಕೊಡಲಾಗಿದೆ ಎಂಬ ಮೋದಿಯವರ ಟೀಕೆಗೆ ಪ್ರತಿಕ್ರಿಯಿಸಿದ್ದ ಉದಯನಿಧಿ, ಖುದ್ದು ಮೋದಿ ಅವರೇ ಬಿಜೆಪಿಯ ಹಿರಿಯ ನಾಯಕರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಎಲ್.ಕೆ.ಆಡ್ವಾಣಿ,ಮುರಳಿ ಮನೋಹರ ಜೋಶಿ ಮತ್ತು ಯಶವಂತ ಸಿನ್ಹಾ ಅವರ ಉದಾಹರಣೆಗಳನ್ನು ನೀಡಿದ್ದರು.

ಉದಯನಿಧಿ ತಮಿಳುನಾಡು ವಿಧಾನಸಭೆಯಲ್ಲಿ ಮೊದಲ ಬಾರಿಗೆ ಚಿಪಾಕ್-ಟ್ರಿಪ್ಲಿಕೇನ್ ಕ್ಷೇತ್ರದಿಂದ ಡಿಎಂಕೆ ಅಭ್ಯರ್ಥಿಯಾಗಿದ್ದು, ಮಂಗಳವಾರ ಮತದಾನ ನಡೆದಿದೆ. ಉದಯನಿಧಿಯವರ ಉಮೇದುವಾರಿಕೆಯನ್ನು ಅನರ್ಹಗೊಳಿಸುವಂತೆ ಬಿಜೆಪಿ ತನ್ನ ದೂರಿನಲ್ಲಿ ಚುನಾವಣಾ ಆಯೋಗಕ್ಕೆ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News