ಮುಕೇಶ್ ಅಂಬಾನಿ ಏಶ್ಯದ ಅತಿ ಶ್ರೀಮಂತ ವ್ಯಕ್ತಿ: ಭಾರತದಲ್ಲಿ 3ನೇ ಅತಿ ಹೆಚ್ಚು ಸಂಖ್ಯೆಯ ಶತಕೋಟ್ಯಾಧೀಶರು

Update: 2021-04-07 17:38 GMT

ಹೊಸದಿಲ್ಲಿ, ಎ. 7: ಅಮೆರಿಕ ಮತ್ತು ಚೀನಾದ ಬಳಿಕ ಭಾರತದಲ್ಲಿ ಮೂರನೇ ಅತಿ ಹೆಚ್ಚು ಸಂಖ್ಯೆಯ ಶತಕೋಟ್ಯಾಧೀಶರು ಇದ್ದಾರೆ ಎಂದು ‘ಫೋರ್ಬ್ಸ್ ಮ್ಯಾಗಝಿನ್’ ವರದಿ ಮಾಡಿದೆ. ಪತ್ರಿಕೆಯ ಶ್ರೀಮಂತರ ಹೊಸ ಪಟ್ಟಿಯ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಏಶ್ಯದ ಅತಿ ಶ್ರೀಮಂತ ವ್ಯಕ್ತಿಯ ಸ್ಥಾನವನ್ನು ಮತ್ತೆ ಪಡೆದುಕೊಂಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅವರು ಚೀನಾದ ಉದ್ಯಮಿ ಜಾಕ್ ಮಾರನ್ನು ಹಿಂದಿಕ್ಕಿದ್ದಾರೆ.

ಅಮೆಝಾನ್ ಸ್ಥಾಪಕ ಹಾಗೂ ಸಿಇಒ ಜೆಫ್ ಬೆಝಾಸ್ ಪಟ್ಟಿಯ ಮೊದಲನೇ ಸ್ಥಾನದಲ್ಲಿದ್ದಾರೆ. ಸತತ ನಾಲ್ಕನೇ ವರ್ಷ ಅವರು ಸ್ಥಾನವನ್ನು ಕಾಪಾಡಿಕೊಂಡು ಬಂದಿದ್ದಾರೆ. ಅವರ ನಿವ್ವಳ ಸಂಪತ್ತು 177 ಬಿಲಿಯ ಡಾಲರ್ ಆಗಿದ್ದು, ಕಳೆದ ವರ್ಷದಿಂದ 64 ಬಿಲಿಯ ಡಾಲರ್‌ನಷ್ಟು ಏರಿಕೆಯಾಗಿದೆ.

ಸ್ಪೇಸ್‌ಎಕ್ಸ್ ಸ್ಥಾಪಕ ಎಲಾನ್ ಮಸ್ಕ್ ಎರಡನೇ ಸ್ಥಾನದಲ್ಲಿದ್ದಾರೆ. ಅವರ ನಿವ್ವಳ ಸಂಪತ್ತು 151 ಬಿಲಿಯ ಡಾಲರ್‌ಗೆ ಏರಿಕೆಯಾಗಿದೆ. ಇದು ಅವರ ಕಳೆದ ವರ್ಷದ ಸಂಪತ್ತಿಗಿಂತ ಅಮೋಘ 126.4 ಬಿಲಿಯ ಡಾಲರ್‌ನಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಅವರು 24.6 ಬಿಲಿಯ ಡಾಲರ್‌ನೊಂದಿಗೆ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 31ನೇ ಸ್ಥಾನದಲ್ಲಿದ್ದರು.

‘‘ಅವರ ಟೆಸ್ಲಾ ಶೇರುಗಳ ಮೌಲ್ಯ 705 ಶೇಕಡದಷ್ಟು ಹೆಚ್ಚಾಗಿರುವುದು ಇದಕ್ಕೆ ಕಾರಣವಾಗಿದೆ’’ ಎಂದು ‘ಫೋರ್ಬ್ಸ್’ ಹೇಳಿದೆ.

ಏಶ್ಯ ಮತ್ತು ಭಾರತದ ಅತ್ಯಂತ ಶ್ರೀಮಂತ ಮುಕೇಶ್ ಅಂಬಾನಿ ಜಾಗತಿಕ ಬಿಲಿಯಾಧೀಶರ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಅವರು 84.5 ಬಿಲಿಯ ಡಾಲರ್ (ಸುಮಾರು 6,28,500 ಕೋಟಿ ರೂಪಾಯಿ) ನಿವ್ವಳ ಸಂಪತ್ತು ಹೊಂದಿದ್ದಾರೆ.

ಅದಾನಿ ಗುಂಪಿನ ಅಧ್ಯಕ್ಷ ಗೌತಮ್ ಅದಾನಿ ಭಾರತದ 2ನೇ ಅತಿ ಶ್ರೀಮಂತರಾಗಿದ್ದು, ಜಾಗತಿಕ ಬಿಲಿಯಾಧೀಶರ ಪಟ್ಟಿಯಲ್ಲಿ 24ನೇ ಸ್ಥಾನ ಪಡೆದಿದ್ದಾರೆ. ಅವರು 50.5 ಬಿಲಿಯ ಡಾಲರ್ (ಸುಮಾರು 3.75 ಲಕ್ಷ ಕೋಟಿ ರೂಪಾಯಿ)ನಿವ್ವಳ ಸಂಪತ್ತು ಗಳಿಸಿದ್ದಾರೆ.

ಕಳೆದ ವರ್ಷ ಏಶ್ಯದ ಅತಿ ಶ್ರೀಮಂತರಾಗಿದ್ದ ಜಾಕ್ ಮಾ, ಈ ಬಾರಿ ಆ ಸ್ಥಾನವನ್ನು ಅಂಬಾನಿಗೆ ಬಿಟ್ಟುಕೊಟ್ಟಿದ್ದಾರೆ. ಕಳೆದ ವರ್ಷ ಜಾಗತಿಕ ಪಟ್ಟಿಯಲ್ಲಿ 17ನೇ ಸ್ಥಾನ ಹೊಂದಿದ್ದ ಅವರು ಈ ಬಾರಿ 26ನೇ ಸ್ಥಾನಕ್ಕೆ ಜಾರಿದ್ದಾರೆ. ಅವರ ನಿವ್ವಳ ಸಂಪತ್ತು 48.4 ಬಿಲಿಯ ಡಾಲರ್ ಆಗಿದೆ.

ಪೂನಾವಾಲಾ ಗ್ರೂಪ್‌ನ ಅಧ್ಯಕ್ಷ ಹಾಗೂ ಜಗತ್ತಿನ ಅತಿ ದೊಡ್ಡ ಲಸಿಕೆ ತಯಾರಿಕಾ ಸಂಸ್ಥೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯದ ಸ್ಥಾಪಕ ಸೈರಸ್ ಪೂನಾವಾಲಾ ಭಾರತೀಯ ಅತಿ ಶ್ರೀಮಂತರ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ ಹಾಗೂ ಜಾಗತಿಕ ಪಟ್ಟಿಯಲ್ಲಿ 169ನೇ ಸ್ಥಾನದಲ್ಲಿದ್ದಾರೆ. ಅವರ ನಿವ್ವಳ ಸಂಪತ್ತು 12.7 ಬಿಲಿಯ ಡಾಲರ್ (ಸುಮಾರು 94,460 ಕೋಟಿ ರೂಪಾಯಿ).

ಎಚ್‌ಸಿಎಲ್ ಟೆಕ್ನಾಲಜೀಸ್‌ನ ಸ್ಥಾಪಕ ಶಿವ್ ನಾಡಾರ್ ಭಾರತದ ಮೂರನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಹಾಗೂ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 71ನೇ ಸ್ಥಾನ ಗಳಿಸಿದ್ದಾರೆ. ಅವರ ನಿವ್ವಳ ಸಂಪತ್ತು 23.5 ಬಿಲಿಯ ಡಾಲರ್ (ಸುಮಾರು 1.75 ಲಕ್ಷ ಕೋಟಿ ರೂಪಾಯಿ).

ಅಮೆರಿಕದಲ್ಲಿ 724 ಬಿಲಿಯಾಧೀಶರಿದ್ದರೆ, ಚೀನಾದಲ್ಲಿ 698 ಅತಿ ಶ್ರೀಮಂತರಿದ್ದಾರೆ. ಬಿಲಿಯಾಧೀಶರ ಸಂಖ್ಯೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದ್ದು, 140 ಅತಿ ಶ್ರೀಮಂತರನ್ನು ಅದು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News