ಮುಂದುವರಿದ ರೈತರ ಪ್ರತಿಭಟನೆ: ದಿಲ್ಲಿ ಗಡಿಯ ಪ್ರಮುಖ ಮಾರ್ಗಗಳು ಬಂದ್

Update: 2021-04-07 18:25 GMT

ಹೊಸದಿಲ್ಲಿ, ಎ. 7: ಕೇಂದ್ರ ಸರಕಾರದ ಮೂರು ಕಾಯ್ದೆಗಳ ವಿರುದ್ಧ ತಮ್ಮ ಪ್ರತಿಭಟನೆ ಮುಂದುವರಿಸಿರುವ ರೈತರು ಬುಧವಾರ ದಿಲ್ಲಿ ಹಾಗೂ ಹರ್ಯಾಣ ನಡುವಿನ ಟಿಕ್ರಿ ಹಾಗೂ ಸಿಂಘು ಗಡಿ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಿದ್ದಾರೆ.

 ದಿಲ್ಲಿ-ಉತ್ತರಪ್ರದೇಶ ಗಡಿಯೊಂದಿಗೆ ದಿಲ್ಲಿಯಿಂದ ಗಾಝಿಯಾಬಾದ್‌ಗೆ ಪ್ರಯಾಣಿಸುವವರಿಗೆ ಗಾಝಿಪುರ ಗಡಿಯ ಒಂದು ಸರಕು ಸಾಗಾಟ ರಸ್ತೆಯನ್ನು ಮುಕ್ತವಾಗಿರಿಸಲಾಗಿದೆ. ಆದರೆ, ರೈತರು ಹೆದ್ದಾರಿಯ ಇತರ ರಸ್ತೆಗಳ ತಡೆಯನ್ನು ಮುಂದುವರಿಸಿದ್ದಾರೆ.

ಆನಂದ್ ವಿಹಾರ್, ಡಿಎನ್‌ಡಿ, ಲೋನಿ ಡಿಎನ್‌ಡಿ ಹಾಗೂ ಅಪ್ಸರಾ ಗಡಿಗಳ ಮೂಲಕ ಹಾದು ಹೋಗುವ ದಾರಿಗಳನ್ನು ಬಳಸುವಂತೆ ಪ್ರಯಾಣಿಕರಿಗೆ ದಿಲ್ಲಿ ಪೊಲೀಸರು ಸಲಹೆ ನೀಡಿದ್ದಾರೆ. ಜನವರಿ ಅಂತ್ಯದವರೆಗೆ ಹಲವು ವಾರಗಳ ಕಾಲ ಬಂದ್ ಆಗಿದ್ದ ದಿಲ್ಲಿ-ನೋಯ್ಡಾ ಚಿಲ್ಲಾ ಗಡಿಯ ಎರಡೂ ಸರಕು ಸಾಗಾಟ ರಸ್ತೆಯನ್ನು ವಾಹನ ಚಾಲಕರಿಗೆ ಮುಕ್ತವಾಗಿ ಇರಿಸಲಾಗಿದೆ.

ಔಚಂದಿ, ಪ್ಯಾವು, ಮನಿಯಾರಿ, ಸಾಬೋಲಿ ಹಾಗೂ ಮಂಗೇಶ್ ಗಡಿಗಳ ಮೂಲಕ ಹಾದು ಹೋಗುವ ದಿಲ್ಲಿ ಹಾಗೂ ಹರ್ಯಾಣ ನಡುವಿನ ಇತರ ಕೆಲವು ಆಗಮನ ಹಾಗೂ ನಿರ್ಗಮನ ಸ್ಥಳ ಪೂರ್ಣ ಅಥವಾ ಭಾಗಶಃ ಮುಚ್ಚುಗಡೆ ಮುಂದುವರಿದಿದೆ.

ದಿಲ್ಲಿ ಹಾಗೂ ಹರ್ಯಾಣ ನಡುವೆ ಸಂಚರಿಸುವ ವಾಹನ ಚಾಲಕರು ಲಾಂಪುರ, ಸಫಿಯಾಬಾದ್, ಪಲ್ಲಾ ಹಾಗೂ ಸಿಂಘು ಸ್ಕೂಲ್ ಟೋಲ್ ಟ್ಯಾಕ್ಸ್ ಗಡಿಗಳ ಮೂಲಕ ಪರ್ಯಾಯ ಮಾರ್ಗಗಳು ಅಥವಾ ಗುರುಗ್ರಾಮ ಹಾಗೂ ಫರೀದಾಬ್ ಮೂಲಕ ಹಾದು ಹೋಗುವ ಇತರ ಮಾರ್ಗವನ್ನು ಬಳಸಬಹುದು ಎಂದು ಸಂಚಾರಿ ಪೊಲೀಸರು ಹೇಳಿದ್ದಾರೆ.

ಮೂರು ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ಉತ್ತರಪ್ರದೇಶ ಹಾಗೂ ಹರ್ಯಾಣದ ದಿಲ್ಲಿ ಗಡಿಯಲ್ಲಿ ಕಳೆದ ವರ್ಷ ನವೆಂಬರ್‌ನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News