'ಮೊದಲು ಕಷ್ಟದ ಪ್ರಶ್ನೆಗಳನ್ನು ಉತ್ತರಿಸಿʼ ಎಂಬ ಪ್ರಧಾನಿ ಮೋದಿಯ ಸಲಹೆಯ ಟ್ವೀಟ್‌ ಡಿಲೀಟ್‌ ಮಾಡಿದ ಪಿಐಬಿ

Update: 2021-04-08 18:38 GMT

ಹೊಸದಿಲ್ಲಿ: ಶಾಲಾ ಪರೀಕ್ಷೆಗಳ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಅಪಹಾಸ್ಯ ಮಾಡಿದ ಕಾರಣಕ್ಕೆ ಕೇಂದ್ರ ಸರಕಾರದ ಮುಖವಾಣಿಯಾದ ಪ್ರೆಸ್‌ ಇನ್ಫೋರ್ಮೇಶನ್ ಬ್ಯೂರೋ ಹಾಗೂ ಕೆಲವು ಮಾಧ್ಯಮಗಳು ಪ್ರಧಾನಿ ಮೋದಿ ಹೇಳಿಕೆ ಇರುವ  ಟ್ವೀಟ್ ಅನ್ನು ಅಳಿಸಿ ಹಾಕಿವೆ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ.

ಬುಧವಾರ ನಡೆದ“ಪರೀಕ್ಷಾ ಪೆ ಚರ್ಚಾ” ಕಾರ್ಯಕ್ರಮದ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ವರ್ಚುವಲ್ ಸಂವಾದದಲ್ಲಿ, ಪರೀಕ್ಷೆಗಳಲ್ಲಿ ಮೊದಲಿಗೆ ಸುಲಭವಾದ ಪ್ರಶ್ನೆಗಳಿಗೆ ಬದಲಾಗಿ ಕಠಿಣ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುವಂತೆ ಮೋದಿ ಸಲಹೆ ನೀಡಿದ್ದರು.

ವಿದ್ಯಾರ್ಥಿಗಳು ಯಾವಾಗಲೂ ಆರಂಭದಲ್ಲಿ ಕಠಿಣ ವಿಷಯವನ್ನು ಪ್ರಯತ್ನಿಸಬೇಕು ಹಾಗೂ ಅದಕ್ಕೆ ಹೆಚ್ಚಿನ ಸಮಯವನ್ನು ವಿನಿಯೋಗಿಸಬೇಕು ಎಂದು ಪ್ರಧಾನಿ ಹೇಳಿದ್ದರು. 

"ಕಠಿಣವಾದ ಪ್ರಶ್ನೆಗಳನ್ನು ಮೊದಲು ಪ್ರಯತ್ನಿಸಲು ನಾನು ಸಲಹೆ ನೀಡುತ್ತೇನೆ ಏಕೆಂದರೆ ನಿಮ್ಮ ಮನಸ್ಸು ತಾಜಾವಾಗಿರುತ್ತದೆ ಹಾಗೂ ಕಠಿಣ ಪ್ರಶ್ನೆಗಳನ್ನು ಪರಿಹರಿಸುವ ನಿಮ್ಮ ಸಾಮರ್ಥ್ಯವು ಹೆಚ್ಚು ಇರುತ್ತದೆ" ಎಂದು ಮೋದಿ ಹೇಳಿದ್ದರು.

ಆದರೆ ಮೋದಿ ಅವರ ಸಲಹೆಗಳನ್ನು ಟ್ವಿಟರ್ನಲ್ಲಿ ಅಪಹಾಸ್ಯ ಮಾಡಲಾಗಿದ್ದು, ಇದು ಸಾಂಪ್ರದಾಯಿಕ ಸಲಹೆಯಿಂದ ಭಿನ್ನವಾಗಿದೆ. ಅಲ್ಲಿ ಶಿಕ್ಷಕರು ಹಾಗೂ ಪೋಷಕರು ವಿದ್ಯಾರ್ಥಿಗಳಿಗೆ ಸುಲಭವಾದ ಪ್ರಶ್ನೆಗಳನ್ನು ಮೊದಲು ಪ್ರಯತ್ನಿಸಲು ಮತ್ತು ನಂತರ ಕಷ್ಟಕರವಾದ ಪ್ರಶ್ನೆಗಳಿಗೆ ಉತ್ತರಿಸುವಂತೆ ಹೇಳುತ್ತಾರೆ ಎಂದು ಟ್ವೀಟಿಸಿದ್ದಾರೆ.

ಪ್ರಧಾನಿ ಮೋದಿಯ ಸಲಹೆಯ ಮೇರೆಗೆ ಪತ್ರಿಕಾ ಮಾಹಿತಿ ಬ್ಯೂರೋ, ಮನ್ ಕಿ ಬಾತ್ ಹ್ಯಾಂಡಲ್ ಮತ್ತು ಪ್ರಧಾನ ಮಂತ್ರಿಗಳ ಕಚೇರಿ ಟ್ವೀಟ್ಗಳನ್ನು ಅಳಿಸಿವೆ ಎಂದು ವರದಿಗಳು ತಿಳಿಸಿವೆ. ಆದಾಗ್ಯೂ, ಮೈಗೊವಿಂಡಿಯಾದಲ್ಲಿ ಅವರ ಟ್ವೀಟ್ ಇನ್ನೂ ಲಭ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News