ರಫೇಲ್ ಒಪ್ಪಂದದಲ್ಲಿ ಭ್ರಷ್ಟಾಚಾರ ಆರೋಪ ನಿರಾಕರಿಸಿದ ಡಸ್ಸಾಲ್ಟ್

Update: 2021-04-09 08:49 GMT

ಹೊಸದಿಲ್ಲಿ: ಭಾರತದ ಜತೆಗಿನ ರಫೇಲ್ ಯುದ್ಧ ವಿಮಾನ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳನ್ನು ಫ್ರಾನ್ಸ್ ನ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್ ಏವ್ಯೇಷನ್ ತಳ್ಳಿ ಹಾಕಿದೆ. ಭಾರತೀಯ ಮಧ್ಯವರ್ತಿಯೊಬ್ಬರಿಗೆ ಡಸ್ಸಾಲ್ಟ್ ಒಂದು ಮಿಲಿಯನ್ ಯುರೋಸ್ ತನಕ ಪಾವತಿಸಿದೆ ಎಂಬ ಆರೋಪ ಹೊರಿಸಿ  ಫ್ರಾನ್ಸ್ ನ ಆನ್‍ಲೈನ್ ಪತ್ರಿಕೆ ಮೀಡಿಯಾಪಾರ್ಟ್‍ನಲ್ಲಿ ಪ್ರಕಟವಾದ ತನಿಖಾ ವರದಿಯ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಡಸ್ಸಾಲ್ಟ್ ಒಪ್ಪಂದದಲ್ಲಿ ಯಾವುದೇ ಉಲ್ಲಂಘನೆಗಳಾಗಿಲ್ಲ ಎಂದು ಹೇಳಿದೆ.

ಫ್ರಾನ್ಸ್ ನ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಏಜನ್ಸೆ ಫ್ರಾಂಕಾಯಿಸ್ ಆ್ಯಂಟಿ ಕರಪ್ಶನ್  ನಡೆಸಿದ ತನಿಖೆಯ ಆಧಾರದಲ್ಲಿ  ಮೀಡಿಯಾಪಾರ್ಟ್ ವರದಿ  ಸಿದ್ಧಪಡಿಸಲಾಗಿತ್ತು.

"ಭ್ರಷ್ಟಾಚಾರ ತಡೆಯಲು ಡಸ್ಸಾಲ್ಟ್ ಏವ್ಯೇಷನ್ 2000ರ ಆರಂಭದಿಂದಲೂ ಕಟ್ಟುನಿಟ್ಟಿನ ಆಂತರಿಕ ಪ್ರಕ್ರಿಯೆಗಳನ್ನು ಅನುಸರಿಸುತ್ತಿದೆ, ಪ್ರಮುಖವಾಗಿ ಭಾರತಕ್ಕೆ 36 ರಫೇಲ್ ಯುದ್ಧವಿಮಾನಗಳ ಪೂರೈಕೆಗೆ ಸಂಬಂಧಿಸಿದ ಒಪ್ಪಂದದ ಸಂದರ್ಭ ಯಾವುದೇ  ಉಲ್ಲಂಘನೆಗಳು ನಡೆದಿಲ್ಲ" ಎಂದು ಡಸ್ಸಾಲ್ಟ್ ವಕ್ತಾರರು ಹೇಳಿದ್ದಾರೆ.

ಹಣವನ್ನು  ರಫೇಲ್ ವಿಮಾನಗಳ 50 ಮಾದರಿಗಳನ್ನು ತಯಾರಿಸಲು ಭಾರತದ ಕಂಪೆನಿಯೊಂದಕ್ಕೆ ನೀಡಲಾಗಿತ್ತು ಎಂದು ಡಸ್ಸಾಲ್ಟ್ ಹೇಳಿತ್ತು. ಆದರೆ ಮಾದರಿಗಳನ್ನು ಸಿದ್ಧಪಡಿಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆ ಒದಗಿಸಿಲ್ಲ ಎಂದು ಮೀಡಿಯಾಪಾರ್ಟ್ ವರದಿ ತಿಳಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಈ ಹಿನ್ನೆಲೆಯಲ್ಲಿ ವಿಮಾನ ಮಾದರಿಗಳನ್ನು ಸಿದ್ಧಪಡಿಸಲು ಹಣ ಪಡೆದಿತ್ತೆನ್ನಲಾದ ಕಂಪೆನಿ  ತೆರಿಗೆ ಇನ್‍ವಾಯಿಸ್ ಸಹಿತ ಕೆಲ  ದಾಖಲೆಗಳನ್ನು ಗುರುವಾರ ಬಿಡುಗಡೆಗೊಳಿಸಿ ಆರೋಪ ನಿರಾಧಾರ ಎಂದು ವಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News