18 ವರ್ಷ ಮೇಲ್ಪಟ್ಟವರು ತಮ್ಮ ಧರ್ಮ ಆರಿಸಲು ಸ್ವತಂತ್ರರು: ಸುಪ್ರೀಂ ಕೋರ್ಟ್

Update: 2021-04-09 17:35 GMT

ಹೊಸದಿಲ್ಲಿ,ಎ.9: ಹದಿನೆಂಟು ವರ್ಷ ಮೇಲ್ಪಟ್ಟ ಪ್ರಾಯದವರು ತಮ್ಮ ಧರ್ಮವನ್ನು ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರಾಗಿದ್ದಾರೆ ಎಂದು ಶುಕ್ರವಾರ ಸ್ಪಷ್ಟಪಡಿಸಿದ ಸರ್ವೋಚ್ಚ ನ್ಯಾಯಾಲಯವು,ಧಾರ್ಮಿಕ ಮತಾಂತರಗಳು ಮತ್ತು ವಾಮಾಚಾರವನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶಗಳನ್ನು ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ವಿಚಾರಣೆಗೆ ಅಂಗೀಕರಿಸಲು ನಿರಾಕರಿಸಿತು.

ಸಂವಿಧಾನದ ವಿಧಿ 32ರಡಿ ಇದು ಯಾವ ಸೀಮೆಯ ಅರ್ಜಿ? ನಾವು ನಿಮಗೆ ಭಾರೀ ದಂಡವನ್ನು ವಿಧಿಸುತ್ತೇವೆ. ನಿಮ್ಮ ವಾದಕ್ಕೆ ನೀವೇ ಹೊಣೆಯಾಗುತ್ತೀರಿ ಎಂದು ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್,ಬಿ.ಆರ್.ಗವಾಯಿ ಮತ್ತು ಹೃಷಿಕೇಶ ರಾಯ್ ಅವರನ್ನೊಳಗೊಂಡ ಪೀಠವು ಅರ್ಜಿದಾರರಾದ ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ ಪರ ಹಾಜರಾಗಿದ್ದ ಹಿರಿಯ ವಕೀಲ ಗೋಪಾಲ ಶಂಕರನಾರಾಯಣ ಅವರಿಗೆ ಹೇಳಿತು.

18 ವರ್ಷ ಮೇಲ್ಪಟ್ಟ ವ್ಯಕ್ತಿ ತನ್ನ ಧರ್ಮವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಬಾರದು ಎನ್ನಲು ಯಾವುದೇ ಕಾರಣಗಳಿಲ್ಲ ಎಂದ ಪೀಠವು,ಸಂವಿಧಾನದಲ್ಲಿ ‘ಪ್ರಸಾರ ’ಎಂಬ ಶಬ್ದವಿರುವುದಕ್ಕೆ ಕಾರಣವಿದೆ ಎಂದು ಶಂಕರನಾರಾಯಣ ಅವರಿಗೆ ತಿಳಿಸಿತು.

ಈ ಹಂತದಲ್ಲಿ ಶಂಕರನಾರಾಯಣ ಅವರು ಅರ್ಜಿಯನ್ನು ಹಿಂದೆಗೆದುಕೊಳ್ಳಲು ಹಾಗೂ ಕೇಂದ್ರ ಮತ್ತು ಕಾನೂನು ಆಯೋಗಕ್ಕೆ ಅಹವಾಲು ಸಲ್ಲಿಸಲು ಅನುಮತಿ ಕೋರಿದರು.

 ಕಾನೂನು ಆಯೋಗಕ್ಕೆ ಅಹವಾಲು ಸಲ್ಲಿಸಲು ಅನುಮತಿಯನ್ನು ಪೀಠವು ನಿರಾಕರಿಸಿತು ಮತ್ತು ಅರ್ಜಿಯನ್ನು ಹಿಂದೆಗೆದುಕೊಳ್ಳಲಾಗಿದೆ ಎಂದು ಪರಿಗಣಿಸಿ ವಜಾಗೊಳಿಸಿತು.

ಧರ್ಮದ ನಿಂದನೆಯನ್ನು ತಡೆಯಲು ಧರ್ಮ ಪರಿವರ್ತನೆ ಕಾಯ್ದೆಯನ್ನು ಜಾರಿಗೊಳಿಸಲು ಸಮಿತಿಯೊಂದನ್ನು ನೇಮಿಸುವ ಸಾಧ್ಯಾಸಾಧ್ಯತೆಯನ್ನು ಪರಿಶೀಲಿಸಲು ನಿರ್ದೇಶಗಳನ್ನೂ ಉಪಾಧ್ಯಾಯ ತನ್ನ ಅರ್ಜಿಯಲ್ಲಿ ಕೋರಿದ್ದರು. ಬಲವಂತದಿಂದ ಅಥವಾ ಹೇಗಾದರೂ ಮಾಡಿ ಧಾರ್ಮಿಕ ಮತಾಂತರವು ಸಂವಿಧಾನದ 14,21 ಮತ್ತು 25ನೇ ವಿಧಿಗಳನ್ನು ಉಲ್ಲಂಘಿಸುವುದು ಮಾತ್ರವಲ್ಲ, ಸಂವಿಧಾನದ ಮೂಲಸ್ವರೂಪದ ಅವಿಭಾಜ್ಯ ಅಂಗವಾಗಿರುವ ಜಾತ್ಯತೀತತೆಯ ತತ್ತ್ವಗಳ ವಿರುದ್ಧವೂ ಆಗಿದೆ ಎಂದು ವಾದಿಸಿದ್ದ ಅವರು,ಸಂವಿಧಾನದ 51ಎ ವಿಧಿಯಡಿ ತಮ್ಮ ಕರ್ತವ್ಯವಾಗಿದ್ದರೂ ಕೇಂದ್ರ ಮತ್ತು ರಾಜ್ಯಗಳು ವಾಮಾಚಾರ,ಮೂಢನಂಬಿಕೆಗಳು ಮತ್ತು ಮೋಸದಿಂದ ಧಾರ್ಮಿಕ ಮತಾಂತರಗಳ ಪಿಡುಗನ್ನು ನಿಯಂತ್ರಿಸಲು ವಿಫಲಗೊಂಡಿವೆ ಎಂದು ಹೇಳಿದ್ದರು.

 ಸರಕಾರವು ಇವುಗಳ ವಿರುದ್ಧ ಯಾವುದೇ ದೃಢವಾದ ಕ್ರಮವನ್ನು ಕೈಗೊಳ್ಳಲು ವಿಫಲಗೊಂಡಿದೆ ಎಂದು ಆರೋಪಿಸಿದ್ದ ಅವರು,ಮೂರರಿಂದ ಹತ್ತು ವರ್ಷಗಳವರೆಗೆ ಜೈಲುಶಿಕ್ಷೆ ಮತ್ತು ಭಾರೀ ದಂಡವನ್ನು ಹೇರಬಹುದಾದ ಕಾಯ್ದೆಯೊಂದನ್ನು ಸರಕಾರವು ತರಬಹುದಾಗಿದೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News